ಇಂಫಾಲ: ಕೆಲವೆಡೆ ಹಿಂಸಾಚಾರದ ಘಟನೆಗಳನ್ನು ಹೊರತುಪಡಿಸಿ, ಮಣಿಪುರದ ಮೊದಲ ಹಂತದ ಚುನಾವಣೆಯಲ್ಲಿ ಶೇ.78.3 ರಷ್ಟು ಮತದಾನ ನಡೆದಿದೆ. ಮಣಿಪುರದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ.
ಐದು ಜಿಲ್ಲೆಗಳಲ್ಲಿ ಮೊದಲ ಹಂತದ ಚುನಾವಣೆ ನಡೆದ ಪೈಕಿ ಇಂಫಾಲ ಪಶ್ಚಿಮದಲ್ಲಿ ಅತಿ ಹೆಚ್ಚು ಅಂದರೆ ಶೇ.82.19 ರಷ್ಟು ಮತದಾನ ನಡೆದಿದ್ದು ಇಂಫಾಲ್ ಪೂರ್ವದಲ್ಲಿ ಶೇ.76.64, ಚುರಚಂದಪುರದಲ್ಲಿ ಶೇ.74.45 ರಷ್ಟು ಮತದಾನ, ಬಿಷ್ಣುಪುರ್ ಜಿಲ್ಲೆಯಲ್ಲಿ ಶೇ.73.44 ರಷ್ಟು ಮತದಾನ ನಡೆದಿದೆ.
ಚುರಚಂದಪುರ ಜಿಲ್ಲೆಯಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಸಂಘರ್ಷದಲ್ಲಿ ಓರ್ವ ವ್ಯಕ್ತಿಗೆ ಗಾಯಗಳುಂಟಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಫಾಲ ಪೂರ್ವದಲ್ಲಿ ಹಲವೆಡೆ ಸಂಘರ್ಷಗಳು ಹಾಗೂ ದಾಳಿಗಳು ನಡೆದಿದ್ದು ಭದ್ರತಾ ಪಡೆಗಳು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡವು.
ಸಿಂಘಾತ್ ನಲ್ಲಿ ಇವಿಎಂ ಗೆ ಕೆಲವು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಅದನ್ನು ಬಳಿಕ ಬದಲಾವಣೆ ಮಾಡಲಾಯಿತು. ಇನ್ನು ಕಾಕ್ವಾ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಗೆ ಹಾನಿ ಮಾಡಿದ್ದ ಘಟನೆಯೂ ವರದಿಯಾಗಿದೆ.