ಪಣಜಿ: ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡಾ 78.94ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಬಹುಕೋನ ಸ್ಪರ್ಧೆಗೆ ಸಾಕ್ಷಿಯಾದ ರಾಜ್ಯದ ಯಾವುದೇ ಭಾಗದಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಗೋವಾದಲ್ಲಿ ಶೇ.78.94ರಷ್ಟು ಮತದಾನ ನಡೆದಿದೆ. ಸ್ಯಾಂಕ್ವೆಲಿಮ್ ಕ್ಷೇತ್ರದಲ್ಲಿ ಶೇ.89.64ರಷ್ಟು ಮತದಾನವಾಗಿದ್ದು, ಅತಿಹೆಚ್ಚಾಗಿದೆ. ಉತ್ತರ ಗೋವಾದಲ್ಲಿ ಶೇ.78ರಷ್ಟು ಮತದಾನ ನಡೆದಿದ್ದು, ದಕ್ಷಿಣ ಗೋವಾ ಶೇ.79ರಷ್ಟು ಗರಿಷ್ಠ ಮತದಾನವಾಗಿದೆ. ಇಂದಿನ ಮತದಾನದಲ್ಲಿ 14 ಇವಿಎಂಗಳು ಮತ್ತು 8 ಬ್ಯಾಲೆಟ್‌ಗಳನ್ನು ಬದಲಾಯಿಸಲಾಗಿದೆ," ಎಂದು ಗೋವಾ ಮುಖ್ಯ ಚುನಾವಣಾ ಅಧಿಕಾರಿ ಕುನಾಲ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಕುನಾಲ್, ಉತ್ತರ ಗೋವಾದ ಸಂಖಾಲಿಮ್ ಕ್ಷೇತ್ರದಲ್ಲಿ ಶೇ.89.61ರಷ್ಟು ಅತಿ ಹೆಚ್ಚು ಮತದಾನವಾಗಿದ್ದರೆ, ದಕ್ಷಿಣ ಗೋವಾದ ಬೆನೌಲಿಮ್‌ನಲ್ಲಿ ಶೇ.70.20ರಷ್ಟು ಕಡಿಮೆ ಮತದಾನವಾಗಿದೆ. ಮಾರ್ಚ್ 10 ರಂದು ಎಣಿಕೆಗಾಗಿ ತೆರೆಯಲಾಗುವ ಇವಿಎಂಗಳಲ್ಲಿ 301 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಲಾಕ್ ಆಗಿದೆ.
ಗೋವಾದಲ್ಲಿ ಪಕ್ಷಗಳ ನಡುವೆ ಪೈಪೋಟಿ: 2022ರ ಗೋವಾ ವಿಧಾನಸಭೆ ಚುನಾವಣೆ ಕಣದಲ್ಲಿ ಹಲವು ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸಾಂಪ್ರದಾಯಿಕ ಸ್ಪರ್ಧಿಗಳ ಹೊರತಾಗಿ ಬಿಜೆಪಿ ಮತ್ತು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಗೋವಾ ಫಾರ್ವರ್ಡ್ ಪಾರ್ಟಿ (GFP), ತೃಣಮೂಲ ಕಾಂಗ್ರೆಸ್ ಪಕ್ಷ (TMC), ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಶಿವಸೇನೆ, ರೆವಲ್ಯೂಷನರಿ ಗೋನ್ಸ್ ಪಾರ್ಟಿ, ಗೋಯೆಂಚೋ ಸ್ವಾಭಿಮಾನ್ ಪಾರ್ಟಿ, ಜೈ ಮಹಾಭಾರತ್ ಪಾರ್ಟಿ ಮತ್ತು ಸಂಭಾಜಿ ಬ್ರಿಗೇಡ್ ಕಣದಲ್ಲಿವೆ. ಇದರ ಜೊತೆಗೆ 68 ಸ್ವತಂತ್ರ ಅಭ್ಯರ್ಥಿಗಳೂ ಚುನಾವಣಾ ಕಣದಲ್ಲಿದ್ದಾರೆ.