ಮಾಸ್ಕೊ: ಉಕ್ರೇನ್ ಮೇಲೆ ಪೂರ್ಣ ಪ್ರಮಾಣದಲ್ಲಿ ರಷ್ಯಾ ವೈಮಾನಿಕ ಮಿಲಿಟರಿ ದಾಳಿ(Russia-Ukraine War) ಆರಂಭಿಸಿದೆ. ರಷ್ಯಾ ತನ್ನ ದೇಶದ "ಮಿಲಿಟರಿ ಮೂಲಸೌಕರ್ಯ" ಮತ್ತು ಗಡಿ ಕಾವಲುಗಾರರ ಮೇಲೆ ದಾಳಿ ಮಾಡುತ್ತಿದೆ, ನಾಗರಿಕರು ಭಯಭೀತರಾಗದೆ ಶಾಂತವಾಗಿ ಇರಬೇಕು, ಇದರಲ್ಲಿ ನಾವು ಜಯ ಸಾಧಿಸುತ್ತೇವೆ ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಭಾಷಣದ ಕೆಲವೇ ಗಂಟೆಗಳಲ್ಲಿ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನಿಯನ್ ಮಿಲಿಟರಿ ವಾಯುನೆಲೆಗಳನ್ನು ಮತ್ತು ಅದರ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಿದೆ ಎಂದು ಹೇಳಿದೆ.
ತಮ್ಮ ಭಾಷಣದಲ್ಲಿ ಪುಟಿನ್ ಅವರು ದೇಶದ ಪೂರ್ವದಲ್ಲಿ "ಜನಾಂಗೀಯ ಹತ್ಯೆ" ಯನ್ನು ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ದೇಶದ ಜನರ ಸುರಕ್ಷತೆ ಹಿತದೃಷ್ಟಿಯಿಂದ ಈ ಮಿಲಿಟರಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಯುದ್ಧವನ್ನು ಸಮರ್ಥಿಸಿಕೊಂಡಿದ್ದಾರೆ.
ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಈಗ ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ಎರಡು ಪಟ್ಟಣಗಳನ್ನು ನಿಯಂತ್ರಿಸುತ್ತಿದ್ದಾರೆ. ರಷ್ಯಾದ ಶೆಲ್ ದಾಳಿಯಿಂದ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ, 9 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ರಷ್ಯಾದ ಯುದ್ಧ ಹೆಲಿಕಾಪ್ಟರ್ ಉಕ್ರೇನಿಯನ್ ಲುಹಾನ್ಸ್ಕ್ ಮೇಲೆ ವಾಯುಪ್ರದೇಶವನ್ನು ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಲುಹಾನ್ಸ್ಕ್ ಪ್ರದೇಶದಲ್ಲಿ ಐದು ರಷ್ಯಾದ ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಮಿಲಿಟರಿ ಹೇಳಿಕೊಂಡ ಕೆಲವೇ ಕ್ಷಣಗಳಲ್ಲಿ ಉಕ್ರೇನಿಯನ್ ವಾಯುನೆಲೆಗಳು ಮತ್ತು ವಾಯು ರಕ್ಷಣಾಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿದೆ.
ರಷ್ಯಾದ ಭೂಮಿಲಿಟರಿ ಪಡೆಗಳು ಉಕ್ರೇನ್ ದಾಟಿಹೋಗಿದ್ದು, ಉಕ್ರೇನ್-ರಷ್ಯಾ ನಡುವಿನ ಅಜೋವ್ ಸಮುದ್ರದಲ್ಲಿ ಹಡಗು ಸಾಗಣೆಯನ್ನು ಮುಚ್ಚುವುದಾಗಿ ರಷ್ಯಾ ಹೇಳಿದೆ.