ಕಣ್ಣೂರು: ಕಣ್ಣೂರಿನ ಯುವಕನೋರ್ವ ಅಪಾಯಕಾರಿ, ಅತಿ ವೇಗವಾಗಿ ವಾಹನ ಚಲಾಯಿಸಿ ಒಂದು ವರ್ಷದ ಅವಧಿಯಲ್ಲಿ 89 ಬಾರಿ ಮೋಟಾರು ವಾಹನ ಇಲಾಖೆಗೆ ಸಿಕ್ಕಿಬಿದ್ದಿದ್ದಾನೆ. ತಪ್ಪಿತಸ್ಥ ಯುವಕನಿಗೆ ಮೋಟಾರು ವಾಹನ ಇಲಾಖೆ ಇದುವರೆಗೆ 1,33,500 ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಕಣ್ಣೂರಿನ ಕೂತುಪರಂಬದ ನಿವಾಸಿಯೊಬ್ಬರು ಅತಿ ವೇಗವಾಗಿ ವಾಹನ ಚಲಾಯಿಸಿದ ಕಾರಣಕ್ಕೆ ಮೋಟಾರು ವಾಹನ ಇಲಾಖೆ ಒಟ್ಟು 1 ಲಕ್ಷ ರೂ. ದಂಡ ವಸೂಲುಮಾಡಿದೆ. ಜನವರಿ 5, 2022 ರಂದು ಒಂದೇ ದಿನ ಅವರಿಗೆ ಏಳು ಬಾರಿ ದಂಡ ವಿಧಿಸಲಾಯಿತು ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ.
ಮೋಟಾರು ವಾಹನ ಇಲಾಖೆಯು ಅತಿವೇಗದ ವಾಹನ ಚಾಲನೆಗೆ 1500 ರೂ. ದಂಡ ವಿಧಿಸುತ್ತದೆ. ಬುಧವಾರ ಘಟಿಸಿದ ವಾಹನ ಅಪಘಾತದ ನಂತರ ಅವರು ವಿಮಾ ಕಂಪನಿಯನ್ನು ಸಂಪರ್ಕಿಸಿದ್ದರು. ಈ ವೇಳೆ ಈ ವಿಷಯಗಳು ಬಯಲಾದವು. ದಂಡ ಪಾವತಿಸದ ಕಾರಣ ಮೋಟಾರು ವಾಹನ ಇಲಾಖೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಯುವಕ ಆರ್‍ಟಿಒ ಕಚೇರಿಗೆ ತೆರಳಿ ದಂಡ ಪಾವತಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.