ನವದೆಹಲಿ: 'ಹಿಟ್ ಅಂಡ್ ರನ್' ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇನ್ಮುಂದೆ 8 ಪಟ್ಟು ಹೆಚ್ಚು ಪರಿಹಾರ ಸಿಗಲಿದೆ.
'ಹಿಟ್ ಅಂಡ್ ರನ್' ಪ್ರಕರಣದಲ್ಲಿ ಸಂತ್ರಸ್ತ ಸಾವಿನ ನಂತರ ಸಂಬಂಧಿಕರಿಗೆ ನೀಡುವ ಪರಿಹಾರವನ್ನು ಏಪ್ರಿಲ್ 1 ರಿಂದ 8 ಪಟ್ಟು ಹೆಚ್ಚಿಸಿ 2 ಲಕ್ಷ ರೂಪಾಯಿಗೆ ಏರಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಇದರ ಪ್ರಕಾರ ಅಪಘಾತ ಪ್ರಕರಣಗಳಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಪರಿಹಾರದ ಮೊತ್ತವನ್ನು ರೂ. 12. 500 ನಿಂದ ರೂ. 50,000ಕ್ಕೆ ಹೆಚ್ಚಿಸಲಾಗಿದೆ.
ಈ ಯೋಜನೆಗೆ ಹಿಟ್ ಅಂಡ್ ರನ್ ಮೋಟಾರು ಅಪಘಾತ ಯೋಜನೆ -2022 ಸಂತ್ರಸ್ತರಿಗೆ ಪರಿಹಾರ ಎಂದು ಹೆಸರಿಡಲಾಗಿದ್ದು, ಇದು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ. ಹೆದ್ದಾರಿ ಸಚಿವಾಲಯದ ಅಧಿಸೂಚನೆ ಪ್ರಕಾರ, ಹಿಟ್ ಅಂಡ್ ರನ್ ಮೋಟಾರು ಅಪಘಾತದ ಸಂತ್ರಸ್ತರಿಗೆ ಪರಿಹಾರವನ್ನು ನೀಡಲು ಫೆಬ್ರವರಿ 25, 2022 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಇದರಲ್ಲಿ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಹಿಂದೆ ಹಿಟ್ ಅಂಡ್ ರನ್ ಕೇಸ್ ನಲ್ಲಿ ಮರಣ ಹೊಂದಿದ್ದವಿರೆ 25 ಸಾವಿರ ರೂ. ಪರಿಹಾರ ನೀಡಲಾಗುತಿತ್ತು. ಆದರೆ, ಇನ್ಮುಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಹಾಗೂ ಮರಣ ಹೊಂದಿದಲ್ಲಿ ರೂ. 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಸಂತ್ರಸ್ತರಿಗೆ ಪರಿಹಾರ ಮತ್ತು ಪಾವತಿ ಬಿಡುಗಡೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಕಾಲಮಿತಿಯನ್ನು ಸಹ ನಿಗದಿಪಡಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಇತ್ತೀಚಿನ ಸರ್ಕಾರದ ಅಂಕಿಅಂಶಗಳ ಪ್ರಕಾರ 2020ರಲ್ಲಿ ಭಾರತದಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, 1,31,714 ಸಾವುಗಳು ಸಂಭವಿಸಿವೆ.