ಕಾಸರಗೋಡು: ಸಾಕು ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಪತ್ತೆಯಾಗಿದ್ದು ಕೋವಿಡ್ ನಂತರದ ಗಂಭೀರ ಸಾಮಾಜಿಕ ಪಿಡುಗಿನ ಭಯ ಮೂಡಿಸಿದೆ. ಸಾಕು ನಾಯಿ ಕೆಲವು ದಿನಗಳಿಂದ ಆಹಾರ ಸೇವಿಸದಿರುವುದರಿಂದ ಮಾಲೀಕರು ಪಶು ವೈದ್ಯರಿಗೆ ತೋರಿಸಿದಾಗ ಸಮಸ್ಯೆ ಸ್ಕ್ಯಾನಿಂಗ್ ಮೂಲಕ ಬಹಿರಂಗಗೊಂಡಿತು. ಎರಡು ವರ್ಷದ ಲ್ಯಾಬ್ರಡಾರ್ ತಳಿಯ ಟೋಬಿಯ ಹೊಟ್ಟೆಯಿಂದ ಮಾಸ್ಕ್ ನ್ನು ಬಳಿಕ ಶಸ್ತ್ರಕ್ರಿಯೆ ಮೂಲಕ ಹೊರತೆಗೆಯಲಾಯಿತು. ನೀಲೇಶ್ವರ ಮೂಲದ ರಾಜನ್ ಎಂಬುವರಿಗೆ ಸೇರಿದ ನಾಯಿಗೆ ಈ ಪರಿಸ್ಥಿತಿ ಬಂದೊದಗಿತ್ತು.
ಟೋಬಿ ರಾಜನ್ ಅವರ ಪತ್ನಿಯ ಮಾಸ್ಕ್ ನ್ನು ಕಚ್ಚಿ ಸೇವಿಸಿರಬೇಕು ಎನ್ನಲಾಗಿದೆ. ಮೊದಲ ವಾರದಲ್ಲಿ ನಾಯಿಯು ಯಾವುದೇ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸಲಿಲ್ಲ. ಆದರೆ ನಂತರ ಊಟ ಮಾಡುವಾಗ ವಾಂತಿ ಮಾಡಿಕೊಂಡು ಸುಸ್ತಾಯಿತು. ಬಳಿಕ ಕಾಞಂಗಾಡ್ ಪಶು ವೈದ್ಯರಿಗೆ ತೋರಿಸಲಾಯಿತು. ಬಳಿಕ ಕಣ್ಣೂರು ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಲಾಯಿತು.
ಮಾಸ್ಕ್ ಹೊಟ್ಟೆಯೊಳಗೆ ಇರುವುದನ್ನು ದೃಢಪಡಿಸಿದ ನಂತರ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ನಾಯಿ ಇನ್ನೂ ಚೇತರಿಸಿಕೊಂಡಿಲ್ಲ. ಸದ್ಯ ಊಟ ಮಾಡಲಾಗದ ಸ್ಥಿತಿಯಲ್ಲಿದೆ. ಪ್ರತಿದಿನ ಬೆಳಗ್ಗೆ ಪಯ್ಯನ್ನೂರಿನ ಕ್ಲಿನಿಕ್‍ಗೆ ಕರೆದೊಯ್ದು ಗ್ಲೂಕೋಸ್ ನೀಡಲಾಗುತ್ತದೆ. ನಾಯಿ ಬೇಗ ಚೇತರಿಸಿಕೊಳ್ಳಲಿ ಎಂದು ರಾಜನ್ ಹಾರೈಸಿದ್ದಾರೆ.