ಜೈಪುರ: ಮದುವೆ ಮನೆಗೆ ಹೋಗುತ್ತಿದ್ದ ಕಾರೊಂದು ನದಿಗೆ ಬಿದ್ದ ಪರಿಣಾಮ ಮದುಮಗ ಸೇರಿದಂತೆ 9 ಮಂದಿ ದುರ್ಮರಣವನ್ನಪ್ಪಿರುವ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ಭಾನುವಾರ ನಡೆದಿದೆ.
ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನು ಕೆಲವೇ ಗಂಟೆಯಲ್ಲಿ ಮದುವೆ ಎಂಬ ಸಂತೋಷ ಕುಟುಂಬಸ್ಥರಲ್ಲಿ ಮನೆ ಮಾಡಿತ್ತು. ಆದರೆ, ಇಡೀ ವಿಧಿಯಾಟ ಬೇರೆಯೇ ಆಗಿತ್ತು.
ಮದ್ಯಪಾನ ಸೇವಿಸಿ ಚಾಲಕನು ವರನಿದ್ದ ಕಾರನ್ನು ಚಲಾಯಿಸುತ್ತಿದ್ದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಕೋಟಾದ ಚಂಬಲ್ ನದಿಗೆ ಬಿದ್ದಿದೆ. ಪರಿಣಾಮ ಮದುಮಗ ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಕಾರು ನದಿಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗ ರವಾನಿಸಿದ್ದಾರೆ. ಕ್ರೇನ್ ಸಹಾಯದೊಂದಿಗೆ ಕಾರನ್ನು ನದಿಯಿಂದ ಹೊರ ತೆಗೆದಿದ್ದಾರೆ.
ಘಟನೆ ಸಂಬಂಧ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.