ದುಬೈ: ಯುಎಇಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಹೂಡಿಕೆದಾರರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳಕ್ಕೆ ಸ್ವಾಗತಿಸಿದ್ದಾರೆ. ಭಾರತದಲ್ಲಿ ಕೇರಳ ಅತ್ಯುತ್ತಮ ಕೈಗಾರಿಕಾ ವಾತಾವರಣವನ್ನು ಹೊಂದಿದೆ ಮತ್ತು ಯುಎಇಯ ಹೂಡಿಕೆದಾರರನ್ನು ಸರ್ಕಾರ ಬೆಂಬಲಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಯುಎಇ ಹಣಕಾಸು ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು. ಎಂಟು ದಿನಗಳ ಭೇಟಿಗಾಗಿ ಸಿಎಂ ದುಬೈಯಲ್ಲಿದ್ದಾರೆ.
ಸಭೆಯಲ್ಲಿ ಕೇರಳ ಮತ್ತು ಯುಎಇ ನಡುವೆ ಐತಿಹಾಸಿಕ ಸಂಬಂಧವಿದೆ ಎಂದು ಮುಖ್ಯಮಂತ್ರಿ ಹೇಳಿದರು. ಏತನ್ಮಧ್ಯೆ, ಯುಎಇ ಹಣಕಾಸು ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್-ಮರ್ರಿ ಯುಎಇ ಮತ್ತು ಭಾರತದ ನಡುವಿನ ವ್ಯಾಪಾರ ಸಹಕಾರವು ಹಿಂದಿನ ವರ್ಷಗಳಿಗಿಂತ ಬಲವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಯುಎಇಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿಗಳು ಜನವರಿ 29ರಂದು ಬೆಳಗ್ಗೆ ದುಬೈಗೆ ಆಗಮಿಸಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದರು. ನಂತರ ಅವರು ವಿವಿಧ ಎಮಿರೇಟ್‍ಗಳಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗಲು ಮತ್ತು ಯುಎಇ ಅಧಿಕಾರಿಗಳನ್ನು ಭೇಟಿಯಾಗಲು ಪ್ರಾರಂಭಿಸಿದರು. ಆದರೆ ಈ ಮಧ್ಯೆ ಕೇರಳದಲ್ಲಿ ಲೋಕಾಯುಕ್ತ ಸುಗ್ರೀವಾಜ್ಞೆ ವಿವಾದ ಹಾಗೂ ಕೊರೊನಾ ಬಿಕ್ಕಟ್ಟು ತೀವ್ರಗೊಂಡಿದ್ದು, ಮುಖ್ಯಮಂತ್ರಿಗಳು ತಮ್ಮ ವಿದೇಶ ಪ್ರವಾಸವನ್ನು ನಿಲ್ಲಿಸಿ ಕೂಡಲೇ ವಾಪಸಾಗಬೇಕು ಎಂಬ ಟೀಕೆ ವ್ಯಕ್ತವಾಗಿದೆ.