ಕಾಸರಗೋಡು: ಚಿನ್ನ ಕಳ್ಳಸಾಗಾಟಕ್ಕೆ ಸಂಬಂಧಿಸಿ 32ವರ್ಷಗಳ ಹಿಂದೆ ನಡೆದ ಹಂಸ ಕೊಲೆ ಪ್ರಕರಣದ ಎರಡನೇ ಆರೋಪಿ ತಳಂಗರೆ ನಿವಾಸಿ ಕೆ.ಎಂ ಅಬ್ದುಲ್ಲ ಎಂಬಾತನ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟು ರದ್ದುಗೊಳಿಸಿದೆ. ಎರ್ನಾಕುಳಂ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ 2010 ಸೆ. 29ರಂದು ಅಬ್ದುಲ್ಲನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇದರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
1989 ಫೆ. 12ರಂದು ತಲಪ್ಪಾಡಿಯಲ್ಲಿ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ 370ಕಿ.ಗ್ರಾಂ ತೂಕದ 1600 ಚಿನ್ನದ ಬಿಸ್ಕಟ್, ಕಂದಾಯ ಜಾಗೃತ ದಳ ವಶಪಡಿಸಿಕೊಂಡಿತ್ತು. ಪಾಕಿಸ್ತಾನದಿಂದ ಭೂಗತ ಗೂಂಡಾ ಅಬ್ದುಲ್ ರಹಮಾನ್ ಕಳುಹಿಸಿಕೊಟ್ಟ ಚಿನ್ನವನ್ನು ಮುಂಬಯಿಗೆ ತಲುಪಿಸುವ ನಿಟ್ಟಿನಲ್ಲಿ ಬೇಕಲದ ಮವ್ವಲ್ ನಿವಾಸಿ ಶಾನವಾಸ್ ಹಂಸ ಯಾನೆ ಹಂಸ ಮತ್ತು ಅಬೂಬಕ್ಕರ್ ಎಂಬವರಿಗೆ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಈ ಮಧ್ಯೆ ಚಿನ್ನವನ್ನು ಕಂದಾಯ ಜಾಗೃತ ದಳ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಹಂಸ ಹಾಗೂ ಈತನ ಸಹಚರರು ಇಂಟೆಲಿಜೆನ್ಸ್‍ಗೆ ಮಾಹಿತಿ ನೀಡಿರುವುದರಿಂದ ಚಿನ್ನ ಕೈತಪ್ಪಿರುವುದಾಗಿ ಅರಿತ ಚಿನ್ನಸಾಗಾಟಗಾರರ ತಂಡ, 1989 ಮಾ. 29ರಂದು ಮಂಗಳೂರಿನಿಂದ ಕಾರಿನಲ್ಲಿ ಸಂಚರಿಸುತ್ತಿದ್ದ ಹಂಸ ಅವರನ್ನು ಪೊಯಿನಾಚಿಯಲ್ಲಿ ಗುಂಡಿಕ್ಕಿ ಕೊಲೆಗೈದಿರುವುದಾಗಿ ಕೇಸು ದಾಖಲಾಗಿತ್ತು. ಪ್ರಕರಣದಲ್ಲಿ ಒಟ್ಟು 19ಆರೋಪಿಗಳಿದ್ದು, ಒಂದನೇ ಆರೋಪಿ ಅಬ್ದುಲ್ ರಹಮಾನ್ ಸೇರಿದಂತೆ ಎಂಟು ಮಂದಿ ತಲೆಮರೆಸಿಕೊಂಡಿದ್ದರು. ಮೂವರನ್ನು ಮಾಫಿ ಸಾಕ್ಷಿಗಳಾಗಿ ಪರಿಗಣಿಸಲಾಗಿತ್ತು. ಕೆ.ಎಂ ಅಬ್ದುಲ್ಲ ಸೇರಿದಂತೆ ಆರು ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಇತರ ಇಬ್ಬರು ತಲೆಮರೆಸಿಕೊಂಡಿದ್ದಾರೆ.