ತಿರುವನಂತಪುರ: ಅದೃಷ್ಟವೊಂದಿದ್ದರೆ ರಾತ್ರೋರಾತ್ರಿ ಭಿಕ್ಷುಕ ಶ್ರೀಮಂತನಾಗಬಹುದು, ಸಿರಿವಂತ ಬೀದಿಗೆ ಬರಬಹುದು. ಇದೇ ಅದೃಷ್ಟದ ಮಹಿಮೆ. ಈಗ ಹೇಳುತ್ತಿರುವ ಈ ಘಟನೆಯಲ್ಲಿ ಕೆಲ ದಿನಗಳವರೆಗೂ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ದಿಢೀರ್ ಮಾಡೆಲ್ ಆಗಿ ಮಿಂಚಿದ್ದಾರೆ!
ಕೇರಳದ ದಿನಗೂಲಿ ಕಾರ್ಮಿಕ 60 ವರ್ಷದ ಮಮ್ಮಿಕ್ಕಾ ಈಗ ಮಾಡೆಲ್ ಆಗಿದ್ದು, ಸ್ಥಳೀಯ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಸಾಮಾನ್ಯ ಸಹಜ ಸೌಂದರ್ಯಕ್ಕೆ ಫೋಟೋಗ್ರಾಫರ್ ಮತ್ತಷ್ಟು ಕಳೆ ನೀಡಿ ಮಮ್ಮಿಕ್ಕಾ ಅವರನ್ನು ರೂಪದರ್ಶಿಯಾಗಿ ಮಾಡಿದ್ದಾರೆ.
ಮಮ್ಮಿಕ್ಕಾ ಕೇರಳದ ಕೋಳಿಕ್ಕೋಡ್ ನಿವಾಸಿ. ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು, ಮಾಸಲು ಲುಂಗಿ ಮತ್ತು ಶರ್ಟ್ ಸದಾ ತೊಡುತ್ತಿದ್ದರು. ಕೂಲಿಗೆಂದು ಯಾರಾದರೂ ಕರೆದರೆ ಹೋಗುತ್ತಿದ್ದ ಅವರು ಸ್ಥಳೀಯರಿಗೆ ಚಿರಪರಿಚಿತರೇ. ಆದರೆ ಇದೀಗ ಯಾರೂ ನಂಬಲಾರದಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದು, ಸೂಪರ್ ಗ್ಲಾಮ್ ಮೇಕ್ ಓವರ್‌ನೊಂದಿಗೆ ಅಚ್ಚರಿಗೊಳಿಸಿದ್ದಾರೆ. ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದ ಮಮ್ಮಿಕ್ಕಾ ಸೂಟ್ ಧರಿಸಿ ಐಪ್ಯಾಡ್‌ನೊಂದಿಗೆ ಪೋಸ್ ನೀಡಿದ್ದು ನೋಡುಗರು ಕಣ್ ಕಣ್ ಬಿಡುವಂತಾಗಿದೆ.
ಅಷ್ಟಕ್ಕೂ ಇಂಥದ್ದೊಂದು ಚಮತ್ಕಾರ ಸಾಧ್ಯವಾದದ್ದು ಸ್ಥಳೀಯ ಛಾಯಾಗ್ರಾಹಕ ಶರೀಕ್ ವಯಾಲಿಲ್ ಅವರಿಂದಾಗಿ. ಈ ಸ್ಥಳದಲ್ಲಿ ಫೋಟೋಶೂಟ್‌ಗಾಗಿ ಹೋಗುತ್ತಿದ್ದ ಶರೀಕ್ ಅವರ ಕಣ್ಣಿಗೆ ಮಮ್ಮಿಕ್ಕಾ ಬಿದ್ದಿದ್ದಾರೆ. ಕೂಲಿ ಕಾರ್ಮಿಕರ ಡ್ರೆಸ್‌ನಲ್ಲಿದ್ದರೂ ಅದೇನೋ ಗ್ಲಾಮರ್ ಲುಕ್ ಅವರ ಮೊಗದಲ್ಲಿ ಶರೀಕ್ ಅವರಿಗೆ ಕಂಡಿದೆ. ಮಾತ್ರವಲ್ಲದೇ ಮಲೆಯಾಳಿ ನಟ ವಿನಾಯಕನ್ ಅವರ ಹೋಲಿಕೆ ಅವರ ಮುಖದಲ್ಲಿ ಕಂಡು ಸುಮ್ಮನೇ ಫೋಟೋ ಕ್ಲಿಕ್ ಮಾಡಿ ಜಾಲತಾಣದಲ್ಲಿ ಹಾಕಿದ್ದರು. ಇದನ್ನು ನೋಡಿದ ಹಲವರು ನಟ ವಿನಾಯಕನ್ ಲುಕ್ ಇದೆ ಎಂದೇ ಕಮೆಂಟ್ ಮಾಡಿದರು.
ಅಷ್ಟೇ ಸಾಕಾಯಿತು ಶರೀಕ್ ಅವರಿಗೆ. ತಡ ಮಾಡದೇ ಇಲ್ಲ. ಮಮ್ಮಿಕ್ಕಾ ಅವರಿದ್ದಲ್ಲಿಗೆ ಮೇಕಪ್ ಕಲಾವಿದನನ್ನು ಕರೆದುಕೊಂಡು ಹೋದರು. ಈ ಸಮಯದಲ್ಲಿ ಮಮ್ಮಿಕ್ಕಾ ಕಂಗಾಲಾಗಿ ಹೋದರು. ಆದರೂ ಬೆನ್ನುಬಿಡದ ಶರೀಕ್ ಅವರು ಮೇಕಪ್ ಕಲಾವಿದರಾದ ಮಜ್ನಾಸ್, ಆಶಿಕ್ ಫುವಾದ್ ಮತ್ತು ಶಬೀಬ್ ವಯಾಲಿಲ್ ಅವರಿಂದ ಮೇಕ್ ಅಪ್ ಮಾಡಿಸಿಯೇ ಬಿಟ್ಟರು. ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದೇ ಮಮ್ಮಿಕ್ಕಾ ಅವರ ಅದೃಷ್ಟ ಖುಲಾಯಿಸಿತು.
ಇದೀಗ ಸ್ಥಳೀಯ ಕಂಪೆನಿಯೊಂದು ಮಾಡೆಲ್ ಆಗಿ ಅವರನ್ನು ನೇಮಕ ಮಾಡಿಕೊಂಡಿದೆ. ಸೂಟುಬೂಟು, ದುಬಾರಿ ಗ್ಲಾಸ್ ಧರಿಸಿ ಮಿರಿಮಿರಿ ಮಿಂಚುತ್ತಿದ್ದಾರೆ ಮಮ್ಮಿಕ್ಕಾ.