ಕಲ್ಕತ್ತಾ: ಬಲಾಢ್ಯ ಪ್ರಾದೇಶಿಕ ಪಕ್ಷಗಳ ನೇತಾರರಾದ ಎಂಕೆ ಸ್ಟಾಲಿನ್ ಮತ್ತು ಕೆ ಸಿ ರಾವ್ ಅವರೊಂದಿಗೆ ನಡೆದ ಚರ್ಚೆಯ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸನ್ನು ಕುಟುಕಿದ್ದಾರೆ. ಯಾವುದೇ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್‌ಗೆ ಉತ್ತಮ ಬಾಂಧವ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಪ್ರಾದೇಶಿಕ ಪಕ್ಷಗಳಾದ ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ, ಕಾಂಗ್ರೆಸ್ ಅದರ ದಾರಿಯಲ್ಲಿ ಅದು ಸಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರವಿವಾರ ತಮಿಳುನಾಡು ಮತ್ತು ತೆಲಂಗಾಣದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ ಪಶ್ಚಿಮ ಬಂಗಾಳ ಸಿಎಂ ಬ್ಯಾನರ್ಜಿ, ದೇಶದ ಫೆಡರಲ್ ರಚನೆಯನ್ನು ಹೇಗೆ ರಕ್ಷಿಸುವುದೆಂದು ಚರ್ಚಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಿಂದ ಈ ಚರ್ಚೆಗೆ ಯಾರನ್ನೂ ಆಹ್ವಾನಿಸಿರಲಿಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್‌ಗೆ ಉತ್ತಮ ಸಂಬಂಧವಿಲ್ಲ. ಕಾಂಗ್ರೆಸ್ ಅದರ ದಾರಿಯಲ್ಲಿ ಹೋಗುತ್ತೆ ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಬಿಜೆಪಿ ವಿರುದ್ಧ ಇತರ ವಿರೋಧ ಪಕ್ಷಗಳೊಂದಿಗೆ ಒಗ್ಗೂಡುವಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ತಾನು ಕೇಳಿಕೊಂಡಿದ್ದೇನೆ ಆದರೆ ಅವರು "ಕೇಳಲಿಲ್ಲ" ಎಂದು ಮಮತಾ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಬಂಗಾಳದಲ್ಲಿ ತೃಣಮೂಲದ ಕಡು ಪ್ರತಿಸ್ಪರ್ಧಿಗಳಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ತೆಲಂಗಾಣದ ಕೆ.ಸಿ ರಾವ್ ಅವರೊಂದಿಗೆ ನಡೆದ ಚರ್ಚೆಗಳನ್ನು ಉಲ್ಲೇಖಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, "ದೇಶದ ಫೆಡರಲ್ ರಚನೆಯನ್ನು ಧ್ವಂಸ ಮಾಡಲಾಗಿದೆ. ದೇಶದ ಸಂವಿಧಾನವನ್ನು ಕೆಡವಲಾಗುತ್ತಿದೆ. ಅದನ್ನು ರಕ್ಷಿಸಲು ನಾವೆಲ್ಲರೂ ಒಗ್ಗೂಡಬೇಕಾಗಿದೆ. ನಾವೆಲ್ಲ ಒಂದಾಗಿ ದೇಶದ ಫೆಡರಲ್ ರಚನೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದು ಸಮನ್ವಯಕ್ಕೆ ಬರಬೇಕು" ಎಂದು ಅವರು ಹೇಳಿದ್ದಾರೆ.