ಬದಿಯಡ್ಕ: ಜೀವನವನ್ನು ಸತ್ಕರ್ಮಗಳ ಮೂಲಕ ಸಾರ್ಥಕ ಪಡಿಸುವುದು ಮಾನವ ಜನ್ಮದ ಅಂತಿಮ ಲಕ್ಷ್ಯವಾಗಿದೆ. ಆಂತರ್ಯದ ಭಗವಂತನನ್ನು ಗ್ರಹಿಸಿಕೊಂಡು ನಾವೆಸಗುವ ಪ್ರತಿಯೊಂದು ಕರ್ಮಗಳೂ ಸಾಯುಜ್ಯ ಪ್ರಾಪ್ತಿಗೆ ರಹದಾರಿಯೊದಗಿಸುತ್ತದೆ. ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಅಂತಹ ವಿಶಿಷ್ಟ ವ್ಯಕ್ತಿತ್ವದವರಾಗಿದ್ದರು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು, ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬದಿಯಡ್ಕ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಿಳಿಂಗಾರು ಸಾಯಿಮಂದಿರದಲ್ಲಿ ನಡೆದ ಸಾಯಿರಾಂ ಕಾವ್ಯಾಂಜಲಿ ಕಾರ್ಯಕ್ರಮ-ಕೃತಿ ಬಿಡುಗಡೆ ಹಾಗೂ ನೂತನ ಮನೆ ದುರಸ್ಥಿ ಯೋಜನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಯಿರಾಂ ಭಟ್ ಅವರ ವ್ಯಕ್ತಿತ್ವ, ಸಾಧನೆಗಳು ನಿಜವಾದ ಇತಿಹಾಸವಾಗಿದೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಬಗ್ಗೆ ಮಿಡಿಯುತ್ತಿದ್ದ ಅವರ ಹೃದಯ ವೈಶಾಲ್ಯತೆ ಮಾನವತೆಯಿಂದ ಬೇರೊಂದು ಅನುಭೂತಿಯೆಡೆಗೆ ಅವರನ್ನು ಎತ್ತರಕ್ಕೇರಿಸಿತ್ತು. ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಇನ್ನಷ್ಟು ಮುಂದುವರಿಯಲಿ ಎ|ಂದು ಶ್ರೀಗಳು ತಿಳಿಸಿದರು.
ಸಾಮಾಜಿಕ, ಸಾಂಸ್ಕøತಿಕ ಮುಖಂಡ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಬದುಕು ಹೇಗೆ ಮಾರ್ಗದರ್ಶಿಯೋ ಹಾಗೆ ಸಾರ್ಥಕ ಬದುಕನ್ನು ಸಾಗಿಸಿ ಮಾದರಿಯಾದ ಸಾಯಿರಾಂ ಭಟ್ ಅವರು ಎಂದಿಗೂ ಆದರ್ಶ ವ್ಯಕ್ತಿತ್ವದವರು ಎಂದರು.
ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸುಪುತ್ರ ಕೆ.ಎನ್ ಕೃಷ್ಣ ಭಟ್ ಗೌರವ ಉಪಸ್ಥಿತರಿದ್ದರು. ಈ ಸಂದರ್ಭ ರವಿ ನಾಯ್ಕಾಪು ಬರೆದಿರುವ ಸಾವಿರದ ಸಾಧಕ ಕೃತಿಯನ್ನು ಎಡನೀರು ಶ್ರೀಗಳು ಬಿಡುಗಡೆಗೊಳಿಸಿದರು. ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಕೃತಿಪರಿಚಯ ನೀಡಿದರು. ಕೃತಿಕತೃ ರವಿ ನಾಯ್ಕಾಪು ಉಪಸ್ಥಿತರಿದ್ದರು.
ಈ ಸಂದರ್ಭ ಮನೆದುರಸ್ತಿ ಯೋಜನೆಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಚಾಲನೆ ನೀಡಿದರು. ಜಯಲಕ್ಷ್ಮೀ ಹಾಗೂ ಜಯ ಅವರಿಗೆ ಮನದುರಸ್ಥಿತಿಗೆ ಹಾಗೂ ಸುಂದರ ಅವರಿಗೆ ನೂತನ ಮನೆ ನಿಮಾರ್||ಣಕ್ಕೆ ನೆರವು ಹಸ್ತಾಂತರಿಸಲಾಯಿತು. ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ ರಾವ್ ಬೇಕಲ್, ಗ್ರಾಮಾಭಿವಚೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ಮೇಲ್ವಿಚಾರಕ ದಿನೇಶ ಕೊಕ್ಕಡ, ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಕ.ಜಾಪ ದಕ್ಷಿಣ ಕನ್ನಡ ಜಿಲ್ಲಾ ಘಟಕಾಧ್ಯಕ್ಷ ಪ್ರವೀಣ್ ಕುಮಾರ್ (ಪಮ್ಮಿ) ಕೋಡಿಯಾಲ್ ಬೈಲು, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವತ್ಥ ಪೂಜಾರಿ ಲಾಲ್ ಭಾಗ್, ಕಾಸರಗೋಡು ಕೇಂದ್ರೀಯ ವಿವಿಯ ಪ್ರೊ.ಮೋಹನ್ ಎ.ಕೆ, ಶಾರದಾ ಭಟ್ ಕಿಳಿಂಗಾರು, ಪೊಳಲಿ ನಿತ್ಯಾನಂದ ಕಾರಂತ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು. ವೀ.ಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ಶಾಸಕರಿಂದ ಭರವಸೆ:
ಸಮಾರಂಭದಲ್ಲಿ ನೆರವು ಹಸ್ತಾಂತರಿಸಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಸಾಯಿರಾಂ ಭಟ್ ಹಾಕಿಕೊಟ್ಟ ಮೇಲ್ಪಂಕ್ತಿ ಮಾದರಿಯಾಗಿ ಬೆಳೆಯುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಒಬ್ಬೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದು ಮನೆಯನ್ನಾದರೂ ಕೊಡುಗೆಯಾಗಿ ನೀಡಿದಲ್ಲಿ ಮಹಾನ್ ಕೊಡುಗೆಯಾಗುತ್ತದೆ. ಈ ನಿಟ್ಟಿನಲ್ಲಿ ನಾನು ಒಂದು ಮನೆ ನಿರ್ಮಾಣದ ಹಣ ಕೊಡುವುದಾಗಿ ಭರವಸೆ ನೀಡಿದರು.