ಬದಿಯಡ್ಕ: ಭಜನೆ, ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಸಂದೇಶವನ್ನು ಸಾರುತ್ತಾ ಸಂಸ್ಕøತಿಯ ಉಳಿವಿಗಾಗಿ ಶ್ರಮಿಸಬೇಕು. ನಮ್ಮ ದೇಶದ ಹಿರಿಮೆಯನ್ನು ಮುಂದಿನ ಜನಾಂಗವೂ ಅರಿತು ಮುನ್ನಡೆಸುವಂತೆ ಮಾಡಬೇಕು ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಯವರು ನುಡಿದರು.
ಅವರು ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ವಿವಿಧ ಸಮಿತಿಗಳ ರೂಪೀಕರಣ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಿರಂತರ ದೇವರ ಸ್ಮರಣೆ ಹಾಗೂ ಭಜನೆ ಹಾಗೂ ದೇವರ ನಾಮೋಚ್ಚರಣೆ ಮನೆಮಂದಿಯೆಲ್ಲ ಒಂದಾಗಿ ಮಾಡಬೇಕು. ಮುತ್ತೈದೆಯರು ಸದಾ ಸಿಂಧೂರ, ಕಾಲುಂಗುರ, ಬಳೆ, ನತ್ತು ಹಾಗೂ ಕರಿಮಣಿಯನ್ನು ಧರಿಸಿರಬೇಕು ಎಂದರು.
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಗತ್ಯವಿರುವ ತುಳಸಿ ಹಾಗೂ ಹೂವುಗಳನ್ನು ಮನೆಮನೆಗಳಲ್ಲಿ ನೆಟ್ಟು ಬೆಳೆಸಿದ ಗಿಡಗಳಿಂದ ಸಂಗ್ರಹಿಸುವಂತೆ ಸೂಚಿಸಿದರು. ಇದು ದೇವರಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದರು.
ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ.ಡಿ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಶುಭಾಶಂಸನೆಗೈದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಮಾತನಾಡಿ ಜನರು ಒಗ್ಗಟ್ಟು ಮತ್ತು ಒಂದೇ ಭಾವನೆಯಿಂದ, ಸಮರ್ಪಣಾ ಮನೋಭಾವದಿಂದ ದೇವರ ಸೇವೆಗೆ ಸಿದ್ದರಾದಾಗ ಮಾತ್ರ ಯಾವುದೇ ಕಾರ್ಯ ಯಶಸ್ಸು ಕಾಣಲು ಸಾಧ್ಯ. ಹಾಗಾಗಿ ಒಗ್ಗೂಡಿ ಸೇವಾ ಕೈಂಕರ್ಯಕ್ಕೆ ಸಿದ್ಧರಾಗೋಣ ಎಂದರು. ನಮಸ್ಕಾರ ಮಂಟಪದ ಪ್ರಾಯೋಜಕರಾದ ಪ್ರತಾಪ್ ರೈ ನೆಕ್ರಾಜೆ, ಯುಎಈ ಘಟಕದ ಅಧ್ಯಕ್ಷ ಶಿವಶಂಕರ ನೆಕ್ರಾಜೆ ಮುಂತಾದವರು ಶುಭ ಕೋರಿದರು.
ಮೇ 7ರಿಂದ 12ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವು ಜರಗಲಿದ್ದು ಇದರ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಶುಭ ಕಾರ್ಯದ ಯಶಸ್ವಿಗೆ ಸಹಕರಿಸುವಂತೆ ಕೋರಲಾಯಿತು.
ಮಕ್ಕಳನ್ನು ಪುಣ್ಯ ಕಾರ್ಯದಲ್ಲಿ ತೊಡಗಿಸಿ ಕೊಂಡಾಗ ಅವರಿಗೂ ಧರ್ಮ, ಆಚರಣೆಗಳ ಪ್ರಾಮುಖ್ಯತೆ ಸುಲಭವಾಗಿ ಮನದಟ್ಟಾಗುವಂತೆ ಮಾಡಲು ಸಮಿತಿಗಳಲ್ಲಿ ಮಕ್ಕಳನ್ನೂ ಅಳವಡಿಸಿಕೊಳ್ಳಲು ತೀರ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ವತ್ಸಾ ನೆಕ್ರಾಜೆ ನೂತನ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಹೆಸರುಗಳನ್ನು ವಾಚಿಸಿದರು. ಸೇವಾ ಸಮಿತಿ ಉಪಾಧ್ಯಕ್ಷ ದಿವಾಕರ ಮಾವಿನಕಟ್ಟೆ ಸ್ವಾಗತಿಸಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಮಾವಿನಕಟ್ಟೆ ವಂದಿಸಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಹಾಡಿದ ನಾಮ ಸಂಕೀರ್ತನೆ ಭಕ್ತರ ಮನದಲ್ಲಿ ಸಂಚಲನ ಮೂಡಿಸಿತು.