ನವದೆಹಲಿ: 'ಭಾರತವು ಜಾಗತಿಕವಾಗಿ ಅತಿದೊಡ್ಡ ರೋಗನಿರೋಧಕ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದ್ದು, ವಾರ್ಷಿಕವಾಗಿ 3 ಕೋಟಿ ಗರ್ಭಿಣಿಯರು ಮತ್ತು 2.6 ಕೋಟಿ ಮಕ್ಕಳು ಈ ಕಾರ್ಯಕ್ರಮದಡಿ ಲಸಿಕೆ ಪಡೆಯುವ ಮೂಲಕ ರಕ್ಷಣೆ ಪಡೆಯುತ್ತಿದ್ದಾರೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಸೋಮವಾರ ಹೇಳಿದ್ದಾರೆ.
ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ (ಐಎಂಐ) 4.0 ಅನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಆಯ್ಕೆ ಮಾಡಲಾದ 75 ಜಿಲ್ಲೆಗಳು ಸೇರಿದಂತೆ ಒಟ್ಟು 416 ಜಿಲ್ಲೆಗಳಲ್ಲಿ ಮೂರು ಹಂತದಲ್ಲಿ ಐಎಂಐ 4.0 ಅನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
'ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ನಿತ್ಯದ ಪ್ರತಿರಕ್ಷಣೆಯ ವೇಗವು ನಿಧಾನಗೊಂಡಿದ್ದರೂ, ಐಎಂಐ 4.0 ಈ ಅಂತರವನ್ನು ತುಂಬುವಲ್ಲಿ ಅಪಾರ ಕೊಡುಗೆ ನೀಡಲಿದೆ. ಮಕ್ಕಳು ಮತ್ತು ಗರ್ಭಿಣಿಯರು ಪಡೆಯಬೇಕಾದ ಅಗತ್ಯವಾದ ಲಸಿಕೆ ಪಡೆಯಲು ಇದು ಸಹಕಾರಿಯಾಗಲಿದೆ.
ಭಾರತದ ಅತಿದೊಡ್ಡ ರೋಗನಿರೋಧಕ ಲಸಿಕಾ ಅಭಿಯಾನವು ಜಾಗತಿಕವಾಗಿ ಶ್ಲಾಘನೆ ಪಡೆದಿದೆ' ಎಂದು ಮನ್‌ಸುಖ್ ಹೇಳಿದರು.
ಐಎಂಐ 4.0ನ ಮೊದಲ ಹಂತವು 2022ರ ಫೆಬ್ರುವರಿ- ಏಪ್ರಿಲ್‌ನಲ್ಲಿ 11 ರಾಜ್ಯಗಳಲ್ಲಿ ನಡೆಯಲಿದೆ. ಉಳಿದ ಹಂತಗಳು ಏಪ್ರಿಲ್- ಮೇ ತಿಂಗಳಲ್ಲಿ 22 ರಾಜ್ಯಗಳಲ್ಲಿ ನಡೆಯಲಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯು ತಿಳಿಸಿದೆ.
ಮಾರಣಾಂತಿಕ ಕಾಯಿಲೆಗಳ ವಿರುದ್ಧ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಉಚಿತ ಲಸಿಕೆ ಹಾಕುವ ಮಿಷನ್ ಇಂದ್ರಧನುಷ್ ಯೋಜನೆಗೆ 2014ರ ಡಿ. 25ರಂದು ಚಾಲನೆ ನೀಡಿದೆ.