ಶ್ರೀನಗರ: ಕಳೆದ ವರ್ಷದ ಫೆಬ್ರುವರಿಯಿಂದ ಇಲ್ಲಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಪ್ರದೇಶಗಳಲ್ಲಿ ಭಾರತ-ಪಾಕಿಸ್ತಾನದ ಸೇನಾ ಸಂಘರ್ಷವು ತಗ್ಗಿದ ಕಾರಣ ಕಾಶ್ಮೀರದಲ್ಲಿ 'ಗಡಿ ಪ್ರವಾಸ್ಯೋದ್ಯಮ' ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ.
2003ರ ಕದನ ವಿರಾಮ ದ್ವಿಪಕ್ಷೀಯ ಒಪ್ಪಂದವನ್ನು ಉಭಯ ದೇಶಗಳ ಸೇನೆಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಪರಿಣಾಮ ಎರಡು ದೇಶಗಳ ಗಡಿ ರೇಖೆಗಳಲ್ಲಿ ಶಾಂತಿ ನೆಲೆಸಿದ್ದು, ಜನಜೀವನ ಸಹಜಸ್ಥಿತಿಗೆ ಬಂದಿದೆ. ಇದು ಗಡಿ ಪ್ರವಾಸೋದ್ಯಮ ಆರಂಭಕ್ಕೆ ಹೊಸ ಮಾರ್ಗವನ್ನು ತೆರೆದಂತಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದೊಂದಿಗೆ ಗಡಿ ನಿಯಂತ್ರಣ ರೇಖೆ ಹಂಚಿಕೊಂಡಿರುವ ಉತ್ತರ ಕಾಶ್ಮೀರದ ಬಂಡಿಪೋರಾ, ಬಾರಾಮುಲ್ಲಾ ಹಾಗೂ ಕುಪ್ವಾರ ಜಿಲ್ಲೆಗಳು ಗಡಿ ಪ್ರವಾಸೋದ್ಯಮ ಆರಂಭಕ್ಕೆ ಸೂಕ್ತ ಸ್ಥಳಗಳಾಗಿವೆ.
'ಕಾಶ್ಮೀರದಲ್ಲಿ ಗಡಿ ಪ್ರವಾಸೋದ್ಯಮವನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ.ಈ ಸಂಬಂಧ ಬಂಡಿಪೋರಾ, ಕುಪ್ವಾರ ಹಾಗೂ ಬಾರಾಮುಲ್ಲಾ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ' ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
'ಗಡಿ ಪ್ರವಾಸೋದ್ಯಮಕ್ಕಾಗಿ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ.ಉರಿ, ಗುರೆಜ್, ಕೆರನ್‌ನಂತಹ ಸ್ಥಳಗಳು ಪರಿಗಣನೆಯಲ್ಲಿವೆ.ಕಾಶ್ಮೀರಕ್ಕೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕಾಶ್ಮೀರದ ಗಡಿ ಪ್ರದೇಶದ ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ತೋರುತ್ತಿದ್ದಾರೆ' ಎಂದು ಅವರು ಹೇಳಿದರು.
'ಮುಂದಿನ ದಿನಗಳಲ್ಲಿ ಕುಪ್ವಾರ ಜಿಲ್ಲೆಯ ಬುಂಗಾಸ್‌ನಂತಹ ದೂರದ ಪ್ರದೇಶಗಳ ವೀಕ್ಷಣೆಗೆ ಸೇನೆ ಹಾಗೂ ಪ್ರವಾಸೋದ್ಯಮ ಇಲಾಖೆಯು ಅವಕಾಶ ಕಲ್ಪಿಸಲಿದೆ' ಎಂದು ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ 'ಬುಂಗಸ್ ಮೇಳ'ದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದರು.
'ಬುಂಗಸ್‌ನಂತಹ ಗಡಿ ಪ್ರದೇಶಗಳು ಪ್ರವಾಸಿಗರಿಗೆ ಸುರಕ್ಷಿತವಾಗಿದ್ದು, ಈ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯವನ್ನು ಒದಗಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತವು ಬದ್ಧವಾಗಿದೆ' ಎಂದು ಸೇನೆಯ ಲೆಫ್ಟಿನೆಂಟ್ ಕಮಾಡಿಂಗ್ ಅಧಿಕಾರಿಯೊಬ್ಬರು ಇದೇ ವೇಳೆ ಭರವಸೆ ನೀಡಿದ್ದರು.