ಶ್ರೀನಗರ: ಕಾಶ್ಮೀರದಾದ್ಯಂತ ಬುಧವಾರ ಭಾರಿ ಪ್ರಮಾಣದ ಹಿಮ ಬೀಳುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಿಮ ಹಾಗೂ ಭೂಕುಸಿತದಿಂದಾಗಿ ಕಾಶ್ಮೀರ ಕಣಿವೆಯು ರಸ್ತೆ ಸಂಪರ್ಕ ಕಡಿದುಕೊಂಡಿದ್ದು, ರೈಲು ಸಂಚಾರ ಹಾಗೂ ವಿಮಾನ ಹಾರಾಟ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಶ್ರೀನಗರ: ಕಾಶ್ಮೀರದಾದ್ಯಂತ ಬುಧವಾರ ಭಾರಿ ಪ್ರಮಾಣದ ಹಿಮ ಬೀಳುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಿಮ ಹಾಗೂ ಭೂಕುಸಿತದಿಂದಾಗಿ ಕಾಶ್ಮೀರ ಕಣಿವೆಯು ರಸ್ತೆ ಸಂಪರ್ಕ ಕಡಿದುಕೊಂಡಿದ್ದು, ರೈಲು ಸಂಚಾರ ಹಾಗೂ ವಿಮಾನ ಹಾರಾಟ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಅತಿಯಾದ ಹಿಮ ಬೀಳುತ್ತಿರುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಇದರಿಂದಾಗಿ ನೂರಾರು ವಾಹನಗಳು ಹೆದ್ದಾರಿಯಲ್ಲೇ ಸಿಲುಕಿವೆ.
'ಹಿಮದಿಂದಾಗಿ ಕಾಶ್ಮೀರದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಕುಲ್ಗಾಂ ಜಿಲ್ಲೆ ಹೊರತುಪಡಿಸಿ ಇತರೆ ಎಲ್ಲ ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಲಾಗಿದೆ. ಉಳಿದೆಡೆ ಶೀಘ್ರವೇ ವಿದ್ಯುತ್ ಸರಬರಾಜು ಮಾಡಲಾಗುವುದು ' ಎಂದು ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಅಭಿವೃದ್ಧಿ ಇಲಾಖೆಯು ಟ್ವೀಟ್ ಮಾಡಿದೆ.
'ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ವಿವಿಧೆಡೆ ಹೊರಡಬೇಕಿದ್ದ ಎಲ್ಲ ವಿಮಾನಗಳ ಹಾರಾಟವನ್ನುಅತಿಯಾದ ಹಿಮಪಾತದಿಂದಾಗಿ ರದ್ದುಗೊಳಿಸಲಾಯಿತು' ಎಂದು ಶ್ರೀನಗರ ವಿಮಾನ ನಿಲ್ದಾಣದ ಪ್ರಾಧಿಕಾರದ ನಿರ್ದೇಶಕ ಕುಲ್‌ದೀಪ್ ಸಿಂಗ್ ತಿಳಿಸಿದರು.
'ರೈಲು ಹಳಿಗಳ ಮೇಲೆ ಹಿಮದ ಶೇಖರಣೆಯಿಂದಾಗಿ ಬಾರಾಮುಲ್ಲಾ- ಬನಿಹಾಲ್ ನಡುವಿನ ರೈಲು ಸಂಚಾರವನ್ನು ಬುಧವಾರ ಮುಂಜಾನೆಯಿಂದಲೇ ಸ್ಥಗಿತಗೊಳಿಸಲಾಗಿದೆ' ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.
'ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಅತಿ ಹೆಚ್ಚು ಹಿಮಪಾತವಾಗಿದ್ದು, ಎರಡು ಅಡಿಗಿಂತ ಹೆಚ್ಚು ಗಾತ್ರದ ಹಿಮ ಬಿದ್ದಿದೆ. ಗುರುವಾರ ವಾತಾವರಣದಲ್ಲಿ ಸುಧಾರಣೆ ಕಂಡು ಬರುವ ಸಾಧ್ಯತೆಯಿದೆ' ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಕುಲ್ಗಾಂ ಜಿಲ್ಲೆಯ ತಂಗ್‌ಮಾರ್ಗ್‌ನಲ್ಲಿ ಹಿಮಪಾತದಿಂದ ಮನೆಯ ಮೇಲ್ಛಾವಣಿ ಕುಸಿದು ಹಿಮದಡಿ ಸಿಲುಕಿದ್ದ ಆರು ಮಂದಿಯನ್ನು ಜಿಲ್ಲಾಡಳಿತ ರಕ್ಷಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ಬುಧವಾರ ನಡೆಯಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪರೀಕ್ಷೆಯನ್ನು ಕಾಶ್ಮೀರ ವಿಶ್ವವಿದ್ಯಾಲಯವು ಮುಂದೂಡಿದೆ.