ನವದೆಹಲಿ: ಹಿಜಾಬ್ ವಿರುದ್ಧ ಕರ್ನಾಟಕದಲ್ಲಿ ವ್ಯಕ್ತವಾಗಿರುವ ವಿರೋಧವು 'ವರ್ಣಭೇದ ನೀತಿ ಜಾರಿಗೊಳಿಸುವ ಹೊಸ ಹುನ್ನಾರ ಮತ್ತು ಮುಸ್ಲಿಂ ಮಹಿಳೆಯ ಮೇಲಿನ ದಾಳಿಗೆ ನೆಪವಾಗಿದೆ' ಎಂಬ ಆಕ್ರೋಶ ವ್ಯಕ್ತವಾಗಿದೆ.
ಹಿಜಾಬ್ ಕುರಿತ ಬೆಳವಣಿಗೆಗಳನ್ನು ತೀವ್ರವಾಗಿ ಖಂಡಿಸಿ ಹಲವು ಮಹಿಳಾವಾದಿಗಳು, ಶಿಕ್ಷಣ ತಜ್ಞರು, ಪ್ರಜಾಸತ್ತಾತ್ಮಕ ಸಂಘಟನೆಗಳು, ವಕೀಲರು, ಕಾರ್ಯಕರ್ತರು ಗುರುವಾರ ಬಹಿರಂಗಪತ್ರ ಬಿಡುಗಡೆ ಮಾಡಿದ್ದಾರೆ.
ಮಂಡ್ಯದ ಘಟನೆಯನ್ನು ಪ್ರಮುಖವಾಗಿ ಉಲ್ಲೇಖಿಸಿರುವ ಪ್ರಮುಖರು, 'ಮುಸ್ಲಿಂ ಮಹಿಳೆ ಮೇಲಿನ ಹಲ್ಲೆಗೆ ಹಿಜಾಬ್ ಹೇಗೆ ಒಂದು ನೆಪವಾಗಬಹುದು ಎಂಬುದಕ್ಕೆ ಈ ಘಟನೆಯೇ ಸ್ಪಷ್ಟ ಎಚ್ಚರಿಕೆಯಾಗಿದೆ' ಎಂದು ಹೇಳಿದ್ದಾರೆ.
ಈ ಬಹಿರಂಗ ಪತ್ರಕ್ಕೆ 1,750 ಮಂದಿ ಸಹಿ ಹಾಕಿದ್ದಾರೆ. ಅರುಣಾ ರಾಯ್, ರಾಧಿಕಾ ವೇಮುಲ, ಕವಿತಾ ಕೃಷ್ಣನ್, ಧಾವಲೆ, ಅಯನಿ ರಾಜಾ, ಸಫೂರಾ ಜರ್ಗರ್, ವೃಂದಾ ಗ್ರೋವರ್, ನಿವೇದಿತಾ ಮೆನನ್, ಪ್ರಭಾತ್ ಪಟ್ನಾಯಕ್ ಇವರಲ್ಲಿ ಕೆಲವರು. 15 ರಾಜ್ಯಗಳ 130ಕ್ಕೂ ಹೆಚ್ಚು ಸಂಘಟನೆಗಳು ಪತ್ರದ ಅಡಕವನ್ನು ಅನುಮೋದಿಸಿವೆ.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ, ಬೆಬಾಕ್ ಕಲೆಕ್ಟಿವ್, ಸಹೆಲಿ ಮಹಿಳಾ ಸಂಪನ್ಮೂಲ ಕೇಂದ್ರ, ಆವಾಜ್ ಇ ನಿಜ್ವಾನ್, ರಾಷ್ಟ್ರೀಯ ಜನಾಂದೋಲನ ಮೈತ್ರಿ ಸೇರಿ ಹಲವು ಸಂಘಟನೆಗಳು ಸಹಿ ಹಾಕಿವೆ.
ಕ್ಯಾಂಪಸ್‌ಗಳಲ್ಲಿ ಹಿಜಾಬ್ ನಿಷೇಧಿಸುವುದು 'ದ್ವೇಷದ ಅಪರಾಧ'. ಮುಸ್ಲಿಂ ಮಹಿಳೆಯರ 'ಆನ್‌ಲೈನ್ ಹರಾಜು' ಕುರಿತ ಇತ್ತೀಚಿನ ಘಟನೆ ನಂತರ ಹಿಂದೂ ಪರಮಾಧಿಕಾರ ದ್ಯೋತಕದ ಈ ಬೆಳವಣಿಗೆ ನಡೆದಿದೆ. ಹಿಜಾಬ್ ಧರಿಸಿದವರನ್ನು ಪ್ರತ್ಯೇಕವಾಗಿ ಕೂರಿಸುವುದು, ಕಾಲೇಜಿನಿಂದ ಹೊರಗಿರುವಂತೆ ಸೂಚಿಸುವುದು ವರ್ಣಭೇದ ನೀತಿಯ ಮನಸ್ಥಿತಿಯಲ್ಲದೇ ಮತ್ತೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸಂವಿಧಾನವು ಶಾಲೆ, ಕಾಲೇಜುಗಳಲ್ಲಿ ಬಹುತ್ವ ಬೆಳೆಸಬೇಕು ಎನ್ನುತ್ತದೆ, ಏಕರೂಪತೆಯಲ್ಲ. ಇದೇ ಕಾರಣಕ್ಕಾಗಿ ಸಿಖ್ಖರಿಗೆ ತರಗತಿಯಷ್ಟೇ ಅಲ್ಲದೆ, ಸೇನೆ, ಪೊಲೀಸ್ ಇಲಾಖೆಯಲ್ಲಿಯೂ ರುಮಾಲು ಧರಿಸಲು ಅವಕಾಶವಿದೆ. ಇದೇ ಕಾರಣಕ್ಕೆ ಹಿಂದೂ ವಿದ್ಯಾರ್ಥಿಗಳು ಬಿಂದಿ, ತಿಲಕ, ವಿಭೂತಿ ಧರಿಸಬಹುದಾಗಿದೆ. ಅದೇ ಪ್ರಕಾರ, ಮುಸಲ್ಮಾನ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಬಹುದಾಗಿದೆ ಎಂದು ಪ್ರತಿಪಾದಿಸಿದ್ದಾರೆ.