HEALTH TIPS

ಕೃಷಿಕ ಮಿಂಚಿನಡ್ಕದ ಭೀಮೇಶರ ಭೀಮ ಪ್ರಯತ್ನ: `ರೋಪ್ ವೇ' ಸಂಕದಿಂದ ಹೊಳೆಯ ಎರಡೂ ಬದಿಗೆ ಸಂಪರ್ಕ

           ಬದಿಯಡ್ಕ: ಪೆರಡಾಲ ಗ್ರಾಮ ಜಿಲ್ಲೆಯಲ್ಲೇ ಹಿಂದಿನಿಂದಲೂ ಸಾಂಪ್ರದಾಯಿಕ ಕೃಷಿ, ಹೈನುಗಾರಿಕೆಗೆ ಪ್ರಸಿದ್ದ ಪುಟ್ಟ ಹಳ್ಳಿ. ಗುಜರಾಥಿನಲ್ಲಿ ಕ್ಯಾಂಪ್ಕೋದ ಅಡಿಕೆ ವಿಕ್ರಮಗೊಳ್ಳುವಾಗ ಪೆರಡಾಲ ಪ್ರದೇಶದ ಅಡಿಕೆಗೆ ಮೊದಲ ಆದ್ಯತೆ ನೀಡುತ್ತಾರೆಂಬುದು ಇಲ್ಲಿಯ ಕೃಷಿ ಚೈತನ್ಯದ ಸಾಕ್ಷಿ. ಆಧುನಿಕತೆಯ ನೂರಾರು ಸವಾಲುಗಳ ಮಧ್ಯೆ ಕೃಷಿಕನಾದವನು ತನ್ನತನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಹೊಸತಲ್ಲ. ಕೆಲವೊಮ್ಮೆ ಸರ್ಕಾರಗಳಂತಹ ವ್ಯವಸ್ಥೆಗಳನ್ನು ನಂಬಿದರೆ ಯಶಸ್ಸು ಅಸಾಧ್ಯ. ಈ ಹಿನ್ನೆಲೆಯಲ್ಲಿ ಸ್ವತಃ ಕೃಷಿಕರೇ ಮುಂದೆಬಂದು ತಮ್ಮ ಸವಾಲುಗಳನ್ನು ದಾಟಲು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. 

        ಪೆರಡಾಲ ಗ್ರಾಮ ಗುಡ್ಡತಟ್ಟು ಪ್ರದೇಶಗಳಿಂದ ಕೂಡಿದ ಸ್ಥಳವಾಗಿದ್ದು ಹೆಚ್ಚಿನ ಕೃಷಿ ಭೂಮಿಯೂ ಇಳಿಜಾರು ಪ್ರದೇಶದಲ್ಲಿದೆ. ಪೆರಡಾಲ ವರದಾ ನದಿಯ ಸುತ್ತುಮುತ್ತಲು ಸಂಪೂರ್ಣ ಅಡಿಕೆ, ತೆಂಗು ಕೃಷಿ ಇದೆ. ಅಲ್ಲಿಂದ ಕೃಷಿಕರು ತಮ್ಮ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಹರಸಾಹಸಪಡಬೇಕಾಗಿದೆ. ಇಳಿಜಾರು ಪ್ರದೇಶಗಳಿಂದ ಅಡಿಕೆ, ತೆಂಗಿನಕಾಯಿಗಳ ಸಾಗಾಟ ದೊಡ್ಡ ಸಮಸ್ಯೆಯಾಗಿದೆ. ಇಂದಿನ ಕಾಲದಲ್ಲಿ ಕೂಲಿಯಾಳುಗಳ ಕೊರತೆ, ವೆಚ್ಚವನ್ನು ಸರಿದೂಗಿಸಲೂ ಕೃಷಿಕರು ಕಷ್ಟಪಡುತ್ತಿದ್ದಾರೆ. ಪೆರಡಾಲ ವರದಾ ನದಿಯ ಮಿಂಚಿನಡ್ಕದಲ್ಲಿ ಪರಂಪರಾಗತವಾಗಿ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದಿಂದ ಬಂದಂತಹ ಭೀಮೇಶರ ಭೀಮ ಪ್ರಯತ್ನದ ಫಲವಾಗಿ ಹೊಳೆಯ ಎರಡೂ ಬದಿಗೆ ಸಾಗಲು ರೋಪ್ ವೇ ಸಂಕ ನಿರ್ಮಾಣವಾಗಿದೆ.


          ಹಿರಿಯ ಕೃಷಿಕ ಮಿಂಚಿನಡ್ಕ ಕೃಷ್ಣ ಭಟ್ಟರಿಗೆ ಹೊಳೆಯ ಎರಡೂ ಬದಿಯಲ್ಲಿ ಕೃಷಿ ಭೂಮಿಯಿದೆ. ಪ್ರತೀವರ್ಷ ಹೊಳೆಗೆ ಅಡ್ಡವಾಗಿ ಅಡಿಕೆಮರದ ಸಂಕವನ್ನು ನಿರ್ಮಿಸುತ್ತಿದ್ದರು. ಹೊಳೆಯ ಎರಡೂ ಬದಿಯ ಜನರು ಇದೇ ಸಂಕದ ಸಹಾಯದಿಂದ ಸಾಗುತ್ತಿದ್ದರು. ಒಂದೆಡೆ ಉದಯಗಿರಿ ಶಾಲೆ, ಇನ್ನೊಂದು ಬದಿಯಲ್ಲಿ ನೀರ್ಚಾಲು, ಕುಂಟಿಕಾನ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು, ತಮ್ಮ ಅವಶ್ಯಕತೆಗಳಿಗೆ ಸಾಗಲು ಸಾರ್ವಜನಿಕರೂ ಇದೇ ದಾರಿಯನ್ನು ಬಳಸಬೇಕಾಗಿದೆ. ಮಳೆಗಾಲದಲ್ಲಿ ಸಂಕವಿಲ್ಲದಿದ್ದರೆ ಅತ್ತಿಂದಿತ್ತ ಸಾಗುವುದೇ ಊರಿನ ಜನರಿಗೆ ಸಮಸ್ಯೆಯಾಗಿತ್ತು. ಈ ಅಡಿಕೆ ಮರದ ಸಂಕವು ಎರಡೂ ಪ್ರದೇಶದ ಜನರಿಗೆ ನೆರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಊರಿನ ಜನರು ಅಲ್ಲೊಂದು ಶಾಶ್ವತವಾದ ಸೇತುವೆಯ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಅದೆಷ್ಟೋ ಬಾರಿ ಮನವಿಯನ್ನೂ ಸಲ್ಲಿಸಿದ್ದರು. ಆದರೆ ಅದು ಯಾವುದೇ ಪ್ರಯೋಜನವನ್ನು ಕಂಡಿರಲಿಲ್ಲ. ಕ್ರಮೇಣ ಸಂಕನಿರ್ಮಾಣದ ಕೆಲಸವು ತುಂಬಾ ದುಬಾರಿಯಾದ ಹಿನ್ನೆಲೆಯಲ್ಲಿ ಕೃಷ್ಣ ಭಟ್ಟರು ಹಿಂದೆಸರಿದಿದ್ದರು.


               ಭೀಮೇಶರ ಭೀಮಪ್ರಯತ್ನ :

    ಕೃಷ್ಣ ಭಟ್ಟರ ಪುತ್ರ ಭೀಮೇಶರು ಅಟೋಮೋಬೈಲ್ ಡಿಪ್ಲೊಮಾ ಮಾಡಿದ್ದರೂ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಹಿರಿಯರಿಂದ ಬಂದ ಭೂಮಿಯನ್ನು ಸಂರಕ್ಷಿಸಿಕೊಂಡು ಆಧುನಿಕತೆಯ ಸ್ಪರ್ಶವನ್ನು ನೀಡಿ ತಮ್ಮ ಕೃಷಿಪ್ರದೇಶವನ್ನು ನೋಡಿಕೊಳ್ಳುತ್ತಿದ್ದಾರೆ. ಹೊಳೆಯ ಎರಡೂ ಬದಿಯ ತೋಟಕ್ಕೆ ಹೋಗಿ ಬರಲು ಏನುಮಾಡಬಹುದು ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ ಕೃಷಿಮೇಳಕ್ಕೆ ತೆರಳಿದ ಅವರಿಗೆ ರೋಪ್ ವೇ ನಿರ್ಮಾಣ ಮಾಡಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ಕೊನೆಗೆ ಅವರು ಇದಕ್ಕಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಮೆಕಾನಿಕಲ್ ವಿಭಾಗದಲ್ಲಿ 8 ವರ್ಷಗಳ ಕಾಲ ಉಪನ್ಯಾಸಕರಾಗಿ ಅನುಭವವಿರುವ ಶಿವಮೊಗ್ಗ ಮೂಲದ ಸುನಿಲ್ ಬಿ.ಲಕ್ಕುಂಡಿ ಅವರೊಂದಿಗೆ ಮಾತನಾಡಿ, ಅವರ ಸಲಹೆಯೊಂದಿಗೆ ರೋಪ್ ವೇ ನಿರ್ಮಾಣಕ್ಕೆ ತೊಡಗಿದರು. ಇದೇ ಕಾಲೇಜಿನ ಎಂಜಿನಿಯರಿಂಗ್ ಪೂರೈಸಿರುವ ಬದಿಯಡ್ಕ ಸಮೀಪದ ಮಾರ್ಪನಡ್ಕದ ದೀಪಕ್ ಕೃಷ್ಣ, ಏತಡ್ಕದ ಮಧುಪ್ರಕಾಶ್ ಜೊತೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದರು. ಮಂಗಳೂರು ಬಂದರಿನಲ್ಲಿ ಹಡಗಿನ ಉಪಯೋಗಕ್ಕಿರುವಂತಹ ತುಕ್ಕುಹಿಡಿಯದಂತಹ ಕಬ್ಬಿಣದ ಕಂಬಗಳು, ರೋಪ್ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ತರಿಸಿಕೊಂಡರು. ರೋಪ್ ವೇಗೆ ಇರುವ ತೊಟ್ಟಿಲಿನ ಮೂಲಕ ಸುಮಾರು 250 ಕೆ.ಜಿ.ಯಷ್ಟು ವಸ್ತುಗಳನ್ನು ಆರಾಮವಾಗಿ ಸಾಗಾಟ ಮಾಡಲಾಗುತ್ತಿದೆ. ಇಬ್ಬರು ವ್ಯಕ್ತಿಗಳೂ ಏಕಕಾಲದಲ್ಲಿ ತೊಟ್ಟಿಲಿನಲ್ಲಿ ಕುಳಿತು ಸಾಗಬಹುದಾಗಿದೆ. ಸುಮಾರು 60000 ರೂಪಾಯಿ ವೆಚ್ಚದಲ್ಲಿ ಈ ರೋಪ್ ವೇ ನಿರ್ಮಾಣ ನಡೆದಿದೆ ಎಂದು ಭೀಮೇಶರು ತಿಳಿಸಿದ್ದಾರೆ. ತೊಟ್ಟಿಲಿಗೆ ಬಳ್ಳಿಯನ್ನು ಕಟ್ಟಿ ರಾಟೆಯ ಮೂಲಕ ಕುಳಿತಲ್ಲಿಂದಲೇ ಎರಡೂ ಬದಿಗೆ ಸಾಗಬಹುದಾಗಿದೆ. ಮುಂದೆ ಇದಕ್ಕೆ ಮೋಟಾರು ಅಳವಡಿಸಿದರೇನು ಎಂಬ ಚಿಂತನೆಯೂ ಅವರಲ್ಲಿದೆ. 


                 ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಆದ್ಯತೆ :

        ಅಡಿಕೆ ಕೊಯ್ಲು ನಡೆಸಿ ತೋಟದಲ್ಲಿಯೇ ಅಡಿಕೆಯನ್ನು ಗೊನೆಯಿಂದ ಬೇರ್ಪಡಿಸಿ ಗೋಣಿಚೀಲಗಳಲ್ಲಿ ತುಂಬಿಸಿ ರೋಪ್ ವೇ ಮೂಲಕ ಭೀಮೇಶರು ಸಾಗಿಸುತ್ತಿದ್ದಾರೆ. ಅದೇರೀತಿ ತೋಟಕ್ಕೆ ಗೊಬ್ಬರ ಸಾಗಾಟಕ್ಕೂ ಇದನ್ನು ಬಳಸುತ್ತಿದ್ದಾರೆ. ಅಡಿಕೆ ಮರದ ಸಂಕದಲ್ಲಿ ಗೋಣಿಚೀಲಗಳನ್ನು ಹೊತ್ತು ಸಾಗಲು ಹೆದರಿಕೆಯಿಂದ ಅನೇಕರು ಹಿಂಜಿರಿಯುತ್ತಿದ್ದರು ಎಂದೂ ಅವರು ಹೇಳುತ್ತಿದ್ದಾರೆ. ಯಾವುದೇ ಕೃಷಿ ಉತ್ಪನ್ನವನ್ನು ತೊಟ್ಟಿಲಿನಲ್ಲಿ ಇಟ್ಟು ಹಗ್ಗವನ್ನು ಎಳೆಯುವುದು ಅಥವಾ ಅಳವಡಿಸಲಾದ ಚಕ್ರವನ್ನು ತಿರುಗಿಸುವುದು. ಅಲ್ಲಿಂದ ಮುಂದಕ್ಕೆ ಸರಾಗವಾಗಿ ತೊಟ್ಟಿಲು ಸಾಗುತ್ತದೆ. ಕೊನೆಯಲ್ಲಿ ಓರ್ವ ಇದ್ದರೆ ಸುಲಭದಲ್ಲಿ ಕೆಲಸ ನಡೆಯುತ್ತದೆ. ಹೊಳೆಯು ಸುಮಾರು 25 ಮೀಟರ್ ಅಗಲವಿದೆ. 20 ಫೀಟ್ ಎತ್ತರದಲ್ಲಿ ರೋಪ್ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಕೆಲವು ಮಂದಿಯನ್ನು ದಾಟಿಸುವುದಕ್ಕೂ ಭೀಮೇಶರು ರೋಪ್ ವೇಯನ್ನು ಬಳಸಿದ್ದರು. 82 ವರ್ಷದ ಪ್ರಾಯದ ಕೃಷ್ಣ ಭಟ್ಟರೂ ಸ್ವತಃ ಯಾರ ಸಹಾಯವೂ ಇಲ್ಲದೆ ಇದರಲ್ಲಿ ಪ್ರಯಾಣಿಸಬಲ್ಲರು. ಏನಿದ್ದರೂ ಕೃಷಿಕರೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ಅನುಕೂಲಕ್ಕಾಗಿ ಅನೇಕ ಹೊಸ ಆವಿಷ್ಕಾರಗಳತ್ತ ಮನಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.


    ಅಭಿಮತ: 

     ಪಾರಂಪರಿಕ ಅಡಿಕೆ ಮರದ ಸಂಕ ನಿರ್ಮಿಸಲು ಪ್ರಸ್ತುತ ನೌಕರರ ಕೊರತೆ, ಪ್ರತಿ ವರ್ಷವೂ ವೆಚ್ಚ ಭರಿಸುವುದೇ ಮೊದಲಾದ ಸಮಸ್ಯೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಕೊನೆಗೆ `ರೋಪ್ ವೇ' ಸಂಕದ ಬಗ್ಗೆ ತಲೆಕೆಡಿಸಿಕೊಂಡು ನಿರ್ಮಾಣಕ್ಕೆ ಕಾರಣವಾಯಿತು. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡರೆ ಕೃಷಿಯಲ್ಲಿ ನಿಜವಾಗಿಯೂ ಖುಷಿ ಇದೆ. ಇಂದಿನ ಕಾಲಕ್ಕುನುಗುಣವಾಗಿ ನಾವು ಯೋಚಿಸದ ಹೊರತು ಕೃಷಿಯಂತಹ ಸಾಂಪ್ರದಾಯಿಕ ವ್ಯವಸ್ಥೆಯ ಉನ್ನತೀಕರಣ ಅಸಾಧ್ಯ.

              - ಭೀಮೇಶ ಮಿಂಚಿನಡ್ಕ, ಕೃಷಿಕ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries