ನವದೆಹಲಿ: ರಷ್ಯಾದೊಂದಿಗಿನ ಸಂಘರ್ಷದಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿರುವುದರ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಾಹಿತಿ ಮತ್ತು ನೆರವು ಒದಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಕಂಟ್ರೋಲ್ ರೂಂ ಒಂದನ್ನು ಸ್ಥಾಪಿಸಿದೆ.
ಜೊತೆಗೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ, ಅಲ್ಲಿನ ಭಾರತೀಯ ನಾಗರಿಕರಿಗಾಗಿ 24 ಗಂಟೆಗಳ ಸಹಾಯವಾಣಿಯೊಂದನ್ನು ಸ್ಥಾಪಿಸಿದ್ದಾರೆ. ಉಕ್ರೇನ್ ನಿಂದ ಭಾರತಕ್ಕೆ ಮರಳಲು ವಿಮಾನಗಳು ದೊರೆಯುತ್ತಿಲ್ಲ ಎಂಬ ಕರೆಗಳು ಬರುತ್ತಿವೆ. ಭಾರತೀಯರು ಆತಂಕ ಪಡದಂತೆ ಸಲಹೆ ನೀಡಲಾಗಿದೆ. ಶೀಘ್ರದಲ್ಲಿಯೇ ಸ್ವದೇಶಕ್ಕೆ ಮರಳಲು ವಿಮಾನಗಳ ವ್ಯವಸ್ಥೆ ಮಾಡಲಾಗುವುದು ಎಂದು ಕೈವ್ ನಲ್ಲಿರುವ ಭಾರತೀಯ ರಾಯಭಾರಿ ಹೇಳಿದ್ದಾರೆ.
ಪ್ರಸ್ತುತ ಉಕ್ರೇನ್ ನಲ್ಲಿ ಉಕ್ರೇನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್, ಏರ್ ಅರಬೀಯಾ, ಪ್ಲೈ ದುಬೈ ಮತ್ತು ಕತಾರ್ ಏರ್ ವೇಸ್ ವಿಮಾನಗಳ ಹಾರಾಟ ನಡೆಯುತ್ತಿದೆ. ಹೆಚ್ಚುವರಿ ಬೇಡಿಕೆ ಪೂರೈಸಲು ಹೆಚ್ಚಿನ ವಿಮಾನಗಳ ವ್ಯವಸ್ಥೆಗೆ ಚಿಂತಿಸಲಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿರುವ ಭಾರತೀಯರಿಗೆ ಮಾಹಿತಿ ಮತ್ತು ನೆರವಿಗಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ದೂ.+91 11 23012113, +91 11 23014104, +91 11 23017905 and 1800118797 (ಟೋಲ್ ಪ್ರೀ) ಇ- ಮೇಲ್ situationroom@mea.gov.in ಮತ್ತು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ದೂ. +380 997300428 +380 997300483, Email: cons1.kyiv@mea.gov.in ಸಂಪರ್ಕಿಸಬಹುದು ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.