ಬಸ್ತಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿಯು ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿ ಇನ್ನೂ ಪ್ರಸ್ತುತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಯಾವತಿ ಅವರು, ಸತ್ಯವನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ಅಮಿತ್ ಶಾ ತೋರಿದ್ದಾರೆ ಎಂದು ಹೇಳಿದ್ದರು.
ಬಿಎಸ್‌ಪಿ–ಬಿಜೆಪಿ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುತ್ತವೆ ಎಂದು ವಿರೋಧ ಪಕ್ಷಗಳು ಈ ಎರಡೂ ಹೇಳಿಕೆಗಳ ನಂತರ ಆರೋಪಿಸಿದ್ದವು. ಸಮಾಜವಾದಿ ಪಕ್ಷವು, ‘ಬಿಎಸ್‌ಪಿಯು ಬಿಜೆಪಿಯ ಬಿ ಟೀಂ’ ಎಂದು ಆರೋಪಿಸಿತ್ತು.
ಆರೋಪಗಳಿಗೆ ಮಾಯಾವತಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಬಿಜೆಪಿಯ ಬಿ ಟೀಂ ಆಗಿದ್ದೇ ನಿಜವಾದರೆ, ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಜೊತೆ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಅತ್ಯಾಚಾರ, ಹಲ್ಲೆಗೆ ಗುರಿಯಾದ ದಲಿತರ ಮನೆಗೆ ಬೆಹೆನ್‌ಜೀ (ಮಾಯಾವತಿ) ಭೇಟಿ ನೀಡಿಲ್ಲ ಎಂದು ಈ ಮಾಧ್ಯಮಗಳು ಕೇಳುತ್ತಿವೆ. ಪ್ರಿಯಾಂಕಾ ಗಾಂಧಿಯಂತೆ ಸಂತ್ರಸ್ತರ ಮನೆಗೆ ಹೋಗಿ, ನಾಟಕವಾಡಲು ನಾನು ಯಾವುದೇ ಪಕ್ಷದ ಉಸ್ತುವಾರಿ ಅಥವಾ ಪ್ರಧಾನ ಕಾರ್ಯದರ್ಶಿ ಅಲ್ಲ.
ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ ಇರುವಂತೆ, ನಾನು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷೆ. ಸಂತ್ರಸ್ತರ ಮನೆಗೆ ಹೋಗಿ ಭೇಟಿ ನೀಡಲು, ನೆರವು ನೀಡಲು ನಮ್ಮ ಪಕ್ಷದಲ್ಲಿ ಪದಾಧಿಕಾರಿಗಳಿದ್ದಾರೆ. ಅವರು ಆ ಕೆಲಸ ಮಾಡುತ್ತಾರೆ’ ಎಂದು ಅವರು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.