ನೈರೋಬಿ: ಭಾರತೀಯ ವೈದ್ಯಕೀಯ ಚಿಕಿತ್ಸೆ ಮೂಲಕ ತಮ್ಮ ಮಗಳ ದೃಷ್ಟಿಯನ್ನು ಪುನಃಸ್ಥಾಪಿಸಲಾಗಿದೆ ಎಂದು ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಹೇಳಿದ್ದಾರೆ. ಭಾರತದ ಆಯುರ್ವೇದ ಔಷಧವನ್ನು ಆಫ್ರಿಕಾಕ್ಕೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ಒಡಿಂಗಾ ಹೇಳಿದ್ದಾರೆ. ಒಡಿಂಗಾ ಮತ್ತು ಅವರ ಕುಟುಂಬದವರು ಚಿಕಿತ್ಸೆಗಾಗಿ ಕೊಚ್ಚಿಯ ಶ್ರೀಧರಿಯಂ ಆಯುರ್ವೇದ ಆಸ್ಪತ್ರೆಗೆ ಆಗಮಿಸಿರುವರು. 2017 ರಲ್ಲಿ, ಒಡಿಂಗಾ ಅವರ ಮಗಳು ರೋಸ್ ಮೇರಿ ತನ್ನ ನರಗಳ ಸೋಂಕಿನಿಂದಾಗಿ ದೃಷ್ಟಿ ಕಳೆದುಕೊಂಡಳು.
‘ಮೂರು ವಾರಗಳ ಚಿಕಿತ್ಸೆಯ ಬಳಿಕ ಪುತ್ರಿ ರೋಸ್ ಮೇರಿ ಗಮನಾರ್ಹ ಪ್ರಗತಿ ಸಾಧಿಸಿದ್ದಾಳೆ. ಈಗ ಮಗಳು ಎಲ್ಲವನ್ನೂ ನೋಡಬಲ್ಲಳು. ನಾನು ಭಾರತದ ಸಾಂಪ್ರದಾಯಿಕ ಔಷಧದ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಈ ವಿಧಾನದಿಂದಾಗಿಯೇ ಪುತ್ರಿ ದೃಷ್ಟಿಯನ್ನು ಮರಳಿ ಪಡೆದಳು. ದೇಶದ ಆಯುರ್ವೇದ ಚಿಕಿತ್ಸೆಯನ್ನು ಆಫ್ರಿಕಾಕ್ಕೆ ತರಲು ಮತ್ತು ಚಿಕಿತ್ಸೆಗಾಗಿ ಕೀನ್ಯಾದ ಗಿಡಮೂಲಿಕೆಗಳನ್ನು ಬಳಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಒಡಿಂಗಾ ಹೇಳಿದರು.
ಭಾರತಕ್ಕೆ ಬರುವ ಮೊದಲು ಇಸ್ರೇಲ್ ಮತ್ತು ಚೀನಾದಲ್ಲಿ ಚಿಕಿತ್ಸೆ ಪಡೆದಿದ್ದರು, ಆದರೆ ಪ್ರಯೋಜನವಾಗಲಿಲ್ಲ. ನಂತರ ಕೊಚ್ಚಿಗೆ ಬಂದು ಚಿಕಿತ್ಸೆ ಪಡೆಯಲಾಯಿತು. ಮೊದಲು ಆಯುರ್ವೇದ ಚಿಕಿತ್ಸೆ ಪಡೆಯಲು ಇಷ್ಟವಿರಲಿಲ್ಲ ಎಂದು ಒಡಿಂಗಾ ಹೇಳುತ್ತಾರೆ. ಡಾಕ್ಟರೇಟ್ ಮತ್ತು ಪಿಎಚ್‍ಡಿ ಹೊಂದಿರುವ ತಜ್ಞರು ಮಾಡಲು ಸಾಧ್ಯವಾಗದ ಚಿಕಿತ್ಸೆ ಆಯುರ್ವೇದದಲ್ಲಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿತ್ತು. ನಂತರ ಅವರು 2019 ರಲ್ಲಿ ಕೊಚ್ಚಿಗೆ ಬಂದು ಚಿಕಿತ್ಸೆ ಪಡೆದರು.
ಒಂದು ತಿಂಗಳು ಇಲ್ಲೇ ಇದ್ದು ಚಿಕಿತ್ಸೆ ಪಡೆದಿದ್ದರು. ಬಳಿಕ ಮುಂದುವರಿಕೆ ಚಿಕಿತ್ಸೆಗೆ ಔಷಧಗಳನ್ನು ಕೀನ್ಯಾಕ್ಕೂ ಕಳುಹಿಸಲಾಯಿತು. ಎರಡು ವರ್ಷಗಳ ಕಾಲ ಆಯುರ್ವೇದ ಔಷಧ ಸೇವಿಸಿದ ನಂತರ ರೋಸ್ ಮೇರಿ ತನ್ನ ದೃಷ್ಟಿಯನ್ನು ಮರಳಿ ಪಡೆದಿದ್ದಾಳೆ ಎಂದು ಒಡಿಂಗಾ ಹೇಳಿದ್ದಾರೆ. ಒಡಿಂಗಾ ಮತ್ತು ಅವರ ಕುಟುಂಬವು ತನ್ನ ಮಗಳು ಸಂಪೂರ್ಣವಾಗಿ ಆರೋಗ್ಯವಂತಳಾಗಿದ್ದು ಅಭಿನಂದನೆ ಸಲ್ಲಿಸಲು ಕೇರಳಕ್ಕೆ ಬಂದಿರುವರು.