ನ್ಯೂಯಾರ್ಕ್: ಭಾರತವೇ ಆಗಿರಲಿ, ಅಮೆರಿಕವೇ ಆಗಿರಲಿ ಅಥವಾ ಇನ್ನಾವುದೇ ದೇಶವಾಗಲಿ. ಬಹುತೇಕ ಉದ್ಯೋಗಸ್ಥ ಮಹಿಳೆಯರ ಪಾಡು ಹೇಳತೀರದು. ಅದರಲ್ಲಿಯೂ ಪ್ರಸವದ ನಂತರ ತಿಂಗಳ ಶಿಶುವನ್ನು ಮನೆಯಲ್ಲಿ ಬಿಟ್ಟು ಬರುವ ಮಹಿಳೆಯರ ಸಂಕಟವೂ ಎಲ್ಲೇ ಹೋದರೂ ಒಂದೇ ರೀತಿ.
ಈಗ ಅಂಥದ್ದೇ ಒಂದು ವಿಡಿಯೋ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ ವಾರ್ತಾ ವಾಚಕಿಯೊಬ್ಬಳು ತನ್ನ ಮೂರು ತಿಂಗಳ ಶಿಶುವನ್ನು ಕರೆದುಕೊಂಡು ಸುದ್ದಿ ಓದಲು ಬಂದಿರುವುದು! ಅಮೆರಿಕದಲ್ಲಿ ನಡೆದಿರುವ ಈ ಘಟನೆ ಇದೀಗ ಭಾರಿ ವೈರಲ್ ಆಗಿದೆ.
ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ವೆಸ್ಟ್ ಅಲಿಸ್ ನಿವಾಸಿಯಾದ ವಾರ್ತಾ ವಾಚಕಿ ರೆಬೆಕಾ ಶೂಲ್ಡ್ ವಿಶಿಷ್ಟ ಕಾರಣಕ್ಕೆ ತಾವೇ ಸುದ್ದಿಯಾಗಿದ್ದಾರೆ. 'ಸಿಬಿಎಸ್ 58 ನ್ಯೂಸ್' ಚಾನಲ್ನಲ್ಲಿ ಉದ್ಯೋಗಿಯಾಗಿರುವ ರೆಬೆಕಾ, ಹವಾಮಾನ ವರದಿಗಳನ್ನು ವಾಚಿಸುತ್ತಾರೆ.
ಗರ್ಭಿಣಿ ಅವಧಿಯಲ್ಲಿ ಕರೊನಾ ಇದ್ದ ಕಾರಣ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಅವರು, ಬಾಣಂತನದ ರಜೆ ಮುಗಿಸಿಕೊಂಡು ಇತ್ತೀಚೆಗಷ್ಟೆ ಕಚೇರಿಗೆ ಬರತೊಡಗಿದ್ದಾರೆ. ಅವರ ಮಗುವಿಗೆ ಇನ್ನೂ ಮೂರು ತಿಂಗಳಾಗಿರುವ ಕಾರಣ, ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಅದನ್ನು ಕರೆದುಕೊಂಡೇ ಕಚೇರಿಗೆ ಬರುತ್ತಿದ್ದಾರೆ.
ಆದರೆ ಮೊನ್ನೆ, ಮಗುವನ್ನು ಮಲಗಿಸಿ ಹವಾಮಾನ ವರದಿ ಓದಲು ಹೊರಟಿದ್ದರು. ಆದರೆ ಮಗು ಎದ್ದುಬಿಟ್ಟಿತು. ಏನು ಮಾಡುವುದೆಂದು ತೋಚದೆ ಅವರು ಅದನ್ನು ಎತ್ತಿಕೊಂಡೇ ಕ್ಯಾಮರಾ ಮುಂದೆ ಬಂದರು. ಅಚ್ಚರಿಗೊಂಡ ಸುದ್ದಿ ಸಂಪಾಕರು ಲೈವ್‌ನಲ್ಲಿ ಈ ಮಗು ಅತ್ತರೆ ಮಾನ ಹೋಗುತ್ತದೆ ಎಂದು ಸಂದೇಹ ಪಟ್ಟರು. ಆದರೆ ಈ ಅಮ್ಮ ಮಾತ್ರ ತಮ್ಮ ಮಗಳ ಮೇಲೆ ಅದೆಷ್ಟು ವಿಶ್ವಾಸ ಹೊಂದಿದ್ದರು ಎಂದರೆ ಒಳ್ಳೆ ನಿದ್ದೆ ಮಾಡಿ ಎದ್ದಿದ್ದಾಳೆ ತಂಟೆ ಮಾಡುವುದಿಲ್ಲ ಎಂದರು.
ಮಗಳನ್ನು ಎತ್ತುಕೊಂಡೇ ರೆಬೆಕಾ ಹವಾಮಾನ ವರದಿಯನ್ನು ಪ್ರಸ್ತುತ ಪಡಿಸಿಬಿಟ್ಟರು. ಮಗು ಸುಮ್ಮನೇ ಕುಳಿತಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವನ್ನು ಕಾಳಜಿ ಮಾಡಿದ ಈಕೆ ಮತ್ತು ಶಿಶುವಿನ ಸಂಗಡವೇ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟ ಮಾಧ್ಯಮ ಸಂಸ್ಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.
ಇಲ್ಲಿದೆ ನೋಡಿ ವಿಡಿಯೋ: