ಕೋಲ್ಕತಾ: ಹೌರಾದಲ್ಲಿ ಕಳೆದ ವಾರ ವಿದ್ಯಾರ್ಥಿ ನಾಯಕ ಅನೀಸ್ ಖಾನ್ (28) ಅವರ ಹತ್ಯೆಯು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಂಡಮಾರುತವನ್ನು ಸೃಷ್ಟಿಸಿದೆ. ಸಿಪಿಎಂ,ಕಾಂಗ್ರೆಸ್,ಸಿಪಿಐ-ಎಂಎಲ್ ಮತ್ತು ಇಂಡಿಯನ್ ಸೆಕ್ಯೂಲರ್ ಫ್ರಂಟ್ (ಐಎಸ್‌ಎಫ್) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಘಟಕಗಳು ಘಟನೆಯ ಕುರಿತು ರಾಜ್ಯ ಸರಕಾರ ಮತ್ತು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿವೆ.
ವಿವಿಧ ವಿವಿಗಳು ಮತ್ತು ರಾಜ್ಯದ ವಿವಿಧೆಡೆಗಳಲ್ಲಿ,ವಿಶೇಷವಾಗಿ ಕೋಲ್ಕತಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮುಂಚೂಣಿಯಲ್ಲಿರುವ ಸಿಪಿಎಂನ ವಿದ್ಯಾರ್ಥಿ ಘಟಕ ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಅನೀಸ್ ಕುಟುಂಬಕ್ಕೆ ನ್ಯಾಯಕ್ಕಾಗಿ ಬಲವಾಗಿ ಒತ್ತಾಯಿಸುತ್ತಿದೆ.
ಹೌರಾ ಜಿಲ್ಲೆಯ ಸರದಾ ದಕ್ಷಿಣ ಖಾನ್ ಪಾರಾ ಗ್ರಾಮದ ನಿವಾಸಿಯಾಗಿದ್ದ ಅನೀಸ್ ಖಾನ್ ಕುಟುಂಬವು ಹೇಳಿರುವಂತೆ ಫೆ.18ರಂದು ರಾತ್ರಿ ನಾಲ್ವರು ಅಪರಿಚಿತ ವ್ಯಕ್ತಿಗಳು ಖಾನ್‌ರನ್ನು ಅವರ ನಿವಾಸದ ಎರಡನೇ ಮಹಡಿಯಿಂದ ಕೆಳಗೆಸೆದು ಹತ್ಯೆಗೈದಿದ್ದರು. ಆರೋಪಿಗಳ ಪೈಕಿ ಓರ್ವ ಪೊಲೀಸ್ ಸಮವಸ್ತ್ರದಲ್ಲಿದ್ದ ಎಂದು ಖಾನ್ ತಂದೆ ಸಲೀಂ ಖಾನ್ ಆರೋಪಿಸಿದ್ದಾರೆ.
ಫೆ.18ರಂದು ರಾತ್ರಿ ಹೌರಾದ ಅಮ್ಟಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಮೂವರು ಪೊಲೀಸರನ್ನು ರಾಜ್ಯ ಸರಕಾರವು ಕರ್ತವ್ಯ ಲೋಪದ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳಿಸಿದೆ. ಖಾನ್ ಹತ್ಯೆಯ ಕುರಿತು ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಟಿಎಫ್)ವೊಂದನ್ನೂ ಸರಕಾರವು ರಚಿಸಿದ್ದು,ಪ್ರಕರಣದಲ್ಲಿ ಹೋಮ್‌ಗಾರ್ಡ್ ಕಾಶೀನಾಥ ಬೆರಾ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರೀತಂ ಭಟ್ಟಾಚಾರ್ಯ ಎನ್ನುವವರನ್ನು ಎಸ್ಟಿಎಫ್ ಬಂಧಿಸಿದೆ.
ಆದಾಗ್ಯೂ ಖಾನ್ ಕುಟುಂಬವು ಸಿಬಿಐ ತನಿಖೆಗೆ ಪಟ್ಟು ಹಿಡಿದಿದೆ. ತನ್ನ ಪುತ್ರನ ಸಾವಿಗೆ ಹೊಣೆಯಾಗಿರುವ ರಾಜ್ಯ ಪೊಲೀಸರನ್ನು ತಾವು ನಂಬುವುದಿಲ್ಲ ಎಂದು ಸಲೀಂ ಖಾನ್ ಹೇಳಿದ್ದಾರೆ. ಕೋಲ್ಕತಾದ ಆಲಿಯಾ ವಿವಿಯ ವಿದ್ಯಾರ್ಥಿ ನಾಯಕರಾಗಿದ್ದ ಖಾನ್ ಹಿಂದೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಛಾತ್ರ ಪರಿಷದ್ ಮತ್ತು ಎಡರಂಗದ ವಿದ್ಯಾರ್ಥಿ ಘಟಕಗಳೊಂದಿಗೆ ಗುರುತಿಸಿಕೊಂಡಿದ್ದರೂ ಕಳೆದೆರಡು ವರ್ಷಗಳಿಂದ ಐಎಸ್‌ಎಫ್ ಜೊತೆಯಲ್ಲಿದ್ದರು.
ಸಿಬಿಐ ತನಿಖೆ ಮತ್ತು ಆರೋಪಿಗಳ ಬಂಧನಕ್ಕಾಗಿ ಖಾನ್ ಕುಟುಂಬದ ಬೇಡಿಕೆಗಳನ್ನು ಬೆಂಬಲಿಸಿರುವ ಎಸ್‌ಎಫ್‌ಐ ಕಾರ್ಯಕರ್ತರು ಆಲಿಯಾ ವಿವಿ ವಿದ್ಯಾರ್ಥಿಗಳೊಂದಿಗೆ ಫೆ.19ರಂದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಗಿನಿಂದಲೂ ಎಸ್‌ಎಫ್‌ಐ ಖಾನ್ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿ ಬೀದಿಗಳಲ್ಲಿ,ರಾಜ್ಯಾದ್ಯಂತ ಕಾಲೇಜು ಕ್ಯಾಂಪಸ್‌ಗಳಲ್ಲಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದೆ.ಖಾನ್ ಹತ್ಯೆ ಹಿಂದಿನ ರೂವಾರಿಗಳ ಬಂಧನವಾಗುವವರೆಗೂ ತಮ್ಮ ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ಎಸ್‌ಎಫ್‌ಐ ನಾಯಕತ್ವವು ಸ್ಪಷ್ಟಪಡಿಸಿದೆ.
'ಖಾನ್ ಹತ್ಯೆಯ ಹಿಂದೆ ಬೃಹತ್ ರಾಜಕೀಯ ಪಿತೂರಿಯಿದೆ. ಮುಖ್ಯ ಆರೋಪಿಗಳ ಬಂಧನಕ್ಕಾಗಿ ನಾವು ಆಗ್ರಹಿಸುತ್ತಿದ್ದೇವೆ. ಕೇವಲ ಹೋಮ್‌ಗಾರ್ಡ್ ಮತ್ತು ಸಾಮಾಜಿಕ ಕಾರ್ಯಕರ್ತನನ್ನು ಬಂಧಿಸುವ ಮೂಲಕ ಪೊಲೀಸರು ಮತ್ತು ಆಡಳಿತ ಪ್ರಕರಣವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ 'ಎಂದು ಎಸ್‌ಎಫ್‌ಐ ರಾಜ್ಯ ಸಮಿತಿಯ ನಾಯಕರೋರ್ವರು ಆಪಾದಿಸಿದ್ದಾರೆ.
ಖಾನ್ ಸಾವಿನ ಪ್ರಕರಣದಲ್ಲಿ ಎಸ್‌ಎಫ್‌ಐನ ಆಂದೋಲನದ ಮೇಲೆ ಸಿಪಿಎಂ ಸೂಕ್ಷ್ಮ ನಿಗಾಯಿರಿಸಿದೆ. ಈ ಆಂದೋಲನವು ಬಂಗಾಳ ರಾಜಕೀಯದಲ್ಲಿ ಈಗ ಮೂಲೆಗುಂಪಾಗಿರುವ ತನ್ನ ಕಾರ್ಯಕರ್ತರನ್ನು ಪುನಃಶ್ಚೇತನಗೊಳಿಸಬಹುದು ಎಂಬ ಆಶಯವನ್ನು ಸಿಪಿಎಂ ಹೊಂದಿದೆ. ಬಂಗಾಳವನ್ನು 34 ವರ್ಷಗಳ ಕಾಲ ನಿರಂತರವಾಗಿ ಆಳಿದ್ದ ಸಿಪಿಎಂ ನೇತೃತ್ವದ ಎಡರಂಗವನ್ನು 2011ರ ವಿಧಾನಸಭಾ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪದಚ್ಯುತಗೊಳಿಸಿತ್ತು. ಅಲ್ಲಿಂದೀಚೆಗೆ ಪತನದ ದಾರಿಯಲ್ಲಿ ಸಾಗುತ್ತಿರುವ ಸಿಪಿಎಂಗೆ 2021ರ ವಿಧಾನಸಭಾ ಚುನಾವಣೆಗಳಲ್ಲಿ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.
2011ರಲ್ಲಿ ಶೇ.30ಕ್ಕೂ ಹೆಚ್ಚಿದ್ದ ಅದರ ಮತಗಳ ಪಾಲು 2021ರಲ್ಲಿ ಶೇ.7ಕ್ಕೆ ಕುಸಿದಿತ್ತು. 2020ರ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕವು ಸ್ಫೋಟಗೊಂಡಾಗಿನಿಂದ ಸಂತ್ರಸ್ತ ಜನರಿಗೆ ಪರಿಹಾರವನ್ನು ಒದಗಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಸ್‌ಎಫ್‌ಐ ತನ್ನ ಛಾಪನ್ನು ಮೂಡಿಸುತ್ತಿದೆ. ಇದಕ್ಕಾಗಿ ಅದು ರಚಿಸಿದ್ದ 'ಗುಲಾಬಿ ಸ್ವಯಂಸೇವಕರ 'ಗುಂಪಿನ ಸದಸ್ಯರ ಸಂಖ್ಯೆ 2021ರ ಹೀನಾಯ ಸೋಲಿನ ಬಳಿಕವೂ ಕಳೆದ ವರ್ಷದ ಜೂನ್‌ನಲ್ಲಿ ಕೋಲ್ಕತಾದಲ್ಲಿ 5,000ದಿಂದ 30,000ಕ್ಕೆ ಮತ್ತು ರಾಜ್ಯದಲ್ಲಿ 40,000ದಿಂದ 1.20 ಲಕ್ಷಕ್ಕೆ ಏರಿಕೆಯಾಗಿತ್ತು.
ಗುಲಾಬಿ ಸ್ವಯಂಸೇವಕರು ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ಗಳು, ಮಾಸ್ಕ್‌ಗಳು,ಆಕ್ಸಿಮೀಟರ್ಗಳು,ಆಹಾರ,ಔಷಧಿಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಜನರಿಗೆ ಒದಗಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದರು. ಹಲವರು ಸ್ವಯಂಸೇವಕರಿಗೆ ಸೋಂಕು ತಗುಲಿತ್ತಾದರೂ ಅವರು ಪರಿಹಾರ ಕಾರ್ಯವನ್ನು ನಿಲ್ಲಿಸಿರಲಿಲ್ಲ ಎಂದು ಎಸ್‌ಎಫ್‌ಐ ನಾಯಕರೋರ್ವರು ತಿಳಿಸಿದರು.
2011ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕ ಟಿಎಂಸಿ ಸರಕಾರವು ಕಾಲೇಜುಗಳಲ್ಲಿ ಯೂನಿಯನ್ ಚುನಾವಣೆಗಳನ್ನು ಕ್ರಮೇಣ ನಿಲ್ಲಿಸಿತ್ತು ಮತ್ತು ಇದು ಎಸ್‌ಎಫ್‌ಐನಲ್ಲಿ ಹೊಸ ಕಾರ್ಯಕರ್ತರ ಸೇರ್ಪಡೆಯನ್ನು ತಡೆದಿತ್ತು. ಆದರೆ ಗುಲಾಬಿ ಸ್ವಯಂಸೇವಕರ ಗುಂಪು ಹೊರಹೊಮ್ಮುವುದರೊಂದಿಗೆ ಎಸ್‌ಎಫ್‌ಐಗೆ ಮತ್ತು ವಿಸ್ತರಣೆಯ ಮೂಲಕ ಸಿಪಿಎಂಗೆ ಹೊಸ ಕಾರ್ಯಕರ್ತರ ಸೇರ್ಪಡೆ ಪುನರಾರಂಭಗೊಂಡಿದೆ.
ಇತ್ತೀಚಿನ ಪೌರ ಸಂಸ್ಥೆಗಳ ಚುನಾವಣೆಗಳಲ್ಲಿ ಟಿಎಂಸಿಯ ಬಳಿಕ ಶೇ.16.75ರಷ್ಟು ಮತಗಳಿಕೆಯೊಂದಿಗೆ ಸಿಪಿಎಂ ಪ್ರಧಾನ ಪ್ರತಿಪಕ್ಷ ಬಿಜೆಪಿ (ಶೇ.14.5)ಯನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. 'ಹೊಸ ಮತ್ತು ಯುವಮುಖಗಳನ್ನು ಮುನ್ನೆಲೆಗೆ ತರುವುದು,ಅವರಿಗೆ ಅವಕಾಶ ಒದಗಿಸುವುದು ಮತ್ತು ಇತ್ತೀಚಿನ ವಿವಿಧ ಚುನಾವಣೆಗಳಲ್ಲಿ ಟಿಕೆಟ್ಗಳನ್ನು ನೀಡುವುದು ನಮ್ಮ ಗುರಿಯಾಗಿತ್ತು. ಅನೀಸ್ ಖಾನ್ ಪ್ರಕರಣವು ಎಸ್‌ಎಫ್‌ಐನ್ನು ಇನ್ನಷ್ಟು ಬಲಗೊಳಿಸಬಹುದು ಮತ್ತು ಈ ಪ್ರಕ್ರಿಯೆಗೆ ಇನ್ನಷ್ಟು ವೇಗವನ್ನು ನೀಡಬಹುದು' ಎಂದು ಹಿರಿಯ ಸಿಪಿಎಂ ನಾಯಕರೋರ್ವರು ಹೇಳಿದರು.