ಹಪೂರ್: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿರುವಂತೆಯೇ, ಉತ್ತರ ಪ್ರದೇಶದ ಹಪೂರ್ ಜಿಲ್ಲೆಯಲ್ಲಿ ಇಂದು ಸಂಜೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸ್ ಅವರ ಕಾರಿಗೆ ಗುಂಡು ಹಾರಿಸಲಾಗಿದೆ.
ಹಪೂರ್ ಜಿಲ್ಲೆಯಿಂದ ದೆಹಲಿಗೆ ಹಿಂತಿರುಗುತ್ತಿದ್ದಾಗ ತಮ್ಮ ಕಾರಿನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುವುದಾಗಿ ಓವೈಸಿ ಆರೋಪಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ 24ರಲ್ಲಿನ ಹಪೂರ್- ಗಾಜಿಯಾಬಾದ್ ಮಾರ್ಗದ ಛಿಜರ್ಸಿ ಟೋಲ್ ಪ್ಲಾಜಾ ಬಳಿ ಇಂದು ಸಂಜೆ 6 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿರುವುದಾಗಿ ಅವರು ಹೇಳಿದ್ದಾರೆ.
ಛಿಜರ್ಸಿ ಟೋಲ್ ಗೇಟ್ ಬಳಿ ತಮ್ಮ ಕಾರಿನ ಮೇಲೆ ಕೆಲ ಹೊತ್ತಿನ ಮುಂಚೆ ಗುಂಡಿನ ದಾಳಿ ನಡೆಸಲಾಗಿದೆ. ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಮೂರ್ನಾಲ್ಕು ಮಂದಿ ಗುಂಡು ಹಾರಿಸಿ, ಪರಾರಿಯಾದರು. ನನ್ನ ಕಾರು ಪಂಕ್ಟರ್ ಆಯಿತು. ಆದರೆ, ಮತ್ತೊಂದು ಕಾರಿಗೆ ಸ್ಥಳಾಂತರವಾಗಿ ಅಲ್ಲಿಂದ ನಿರ್ಗಮಿಸಿದ್ದೇನೆ. ನಾವೆಲ್ಲರೂ ಸುರಕ್ಷಿತರಾಗಿದ್ದೇವೆ ಎಂದು ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.