ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಿದ್ದ ಹಾಗೂ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ 25 ವರ್ಷದ ಪೂಜಾ ಶುಕ್ಲಾ ಅವರಿಗೆ ಮುಖ್ಯವಾಹಿನಿಯ ರಾಜಕೀಯದ ಬಾಗಿಲು ತೆರೆದಿದೆ. ಸಮಾಜವಾದಿ ಪಕ್ಷವು ಅವರಿಗೆ ಟಿಕೆಟ್ ನೀಡಿದ್ದು, ಲಖನೌ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಸರ್ಕಾರದ ನೀತಿಗಳನ್ನು ಖಂಡಿಸಿ 2017ರ ಜೂನ್‌ನಲ್ಲಿ ಪೂಜಾ ಶುಕ್ಲಾ ಅವರು ಇತರ 10 ಮಂದಿಯೊಂದಿಗೆ ಲಖನೌ ವಿಶ್ವವಿದ್ಯಾಲಯದ ರಸ್ತೆಯಲ್ಲಿ ಆದಿತ್ಯನಾಥ ಅವರ ಬೆಂಗಾವಲು ವಾಹನಗಳನ್ನು ತಡೆಯಲು ಯತ್ನಿಸಿ, ಕಪ್ಪು ಬಾವುಟ ಪ್ರದರ್ಶಿದ್ದರು. ಈ ಪ್ರತಿಭಟನೆಯ ಮೂಲಕ ಅವರು ಬೆಳಕಿಗೆ ಬಂದಿದ್ದರು.
ಪ್ರತಿಭಟನೆ ನಡೆಸಿದ ಶುಕ್ಲಾರನ್ನು ಜೈಲಿಗೆ ಕಳುಹಿಸಲಾಗಿತ್ತು. ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರೂ ಜೈಲಿಗೆ ಕಳುಹಿಸಿದ್ದನ್ನು ಅವರು ಆಕ್ಷೇಪಿಸಿದ್ದರು. ಜೈಲಿಗೆ ಕಳುಹಿಸಲಾಗುತ್ತದೆ ಎಂಬುದರ ಅಂದಾಜೂ ಅವರಿಗೆ ಇರಲಿಲ್ಲ. ಆದರೆ ಸರಿದಾರಿಯಲ್ಲಿದ್ದ ತಮ್ಮ ಹೋರಾಟದ ಮೇಲೆ ನಂಬಿಕೆ ಇತ್ತು ಎಂದು ಅವರು ಘಟನೆಯನ್ನು ಮೆಲುಕು ಹಾಕಿದ್ದಾರೆ.
20 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಅವರು, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾಗಿದ್ದರು. ಈ ಬಳಿಕ ಅವರು ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕವಾದ ಛತ್ರ ಸಭಾದ ಪ್ರಮುಖ ಸದಸ್ಯೆಯಾಗಿ ಗುರುತಿಸಿಕೊಂಡರು.
ಏಕೆ ಸಮಾಜವಾದಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿರಿ ಎಂದು ಪ್ರಶ್ನಿಸಿದಾಗ, 'ಮುಲಾಯಂ ಸಿಂಗ್ ಅವರ ಹೋರಾಟದ ಹಾದಿ ಹಾಗೂ ಅಖಿಲೇಶ್ ಅವರ ರಾಜಕೀಯ ಶೈಲಿಯಿಂದ ಪ್ರೇರಣೆಗೊಂಡು ಎಸ್‌ಪಿ ಆಯ್ಕೆ ಮಾಡಿಕೊಂಡೆ' ಎಂದಿದ್ದಾರೆ. ಬಿಜೆಪಿ ಹಾಗೂ ಅದರ ಬೆಂಬಲಿಗರು ನಿಯಮಗಳನ್ನು ಬೇಕಾಬಿಟ್ಟಿ ಉಲ್ಲಂಘಿಸುತ್ತಿರುವಾಗ, ಸಮಾಜವಾದಿ ಪಕ್ಷವು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹತ್ತಿರವಾಗಿದೆ ಎಂಬುದನ್ನು ಕಂಡುಕೊಂಡೆ ಎಂದು ಅವರು ವಿವರಿಸಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಿದ್ದ ಕಾರಣ, 2018ರಲ್ಲಿ ಲಖನೌ ವಿಶ್ವವಿದ್ಯಾನಿಲಯವು ಪೂಜಾ ಅವರಿಗೆ ಪ್ರವೇಶಾತಿ ನಿರಾಕರಿಸಿತ್ತು. ಹೀಗಾಗಿ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ರಾಜಕಾರಣಿಯಾಗಿ, ವಿದ್ಯಾರ್ಥಿಗಳು ಹಾಗೂ ಯುವಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
'ಶಿಕ್ಷಣದ ಕಾರಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವಕರು ರಾಜಕೀಯದಿಂದ ದೂರವಿರುತ್ತಾರೆ. ಇದು ಬದಲಾಗಬೇಕು. ರಾಜಕೀಯ ಅರಿವಿರುವ ವಿದ್ಯಾರ್ಥಿ ಮಾತ್ರ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯ. ಈ ಮೂಲಕ ಯುವಜನರು ದೇಶದ ರಾಜಕೀಯವನ್ನು ಬದಲಾಯಿಸಿ ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು' ಎಂದು ಪೂಜಾ ಅಭಿಪ್ರಾಯಪಟ್ಟಿದ್ದಾರೆ.
ಪಲ್ಲವಿ ಪಟೇಲ್, ಸ್ವಾಮಿ ಪ್ರಸಾದ್ ಮೌರ್ಯಗೆ ಟಿಕೆಟ್
ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ಸಹೋದರಿ ಪಲ್ಲವಿ ಪಟೇಲ್, ಯೋಗಿ ಸಂಪುಟದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಸಮಾಜವಾದಿ ಪಕ್ಷವು ಟಿಕೆಟ್ ಪ್ರಕಟಿಸಿದೆ. ಮಾಜಿ ಸಚಿವ ಅಭಿಷೇಕ್ ಮಿಶ್ರಾ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪಲ್ಲವಿ ಅವರು ಕುಶಿನಗರ ಜಿಲ್ಲೆಯ ಫಜಿಲ್‌ನಗರ, ಮೌರ್ಯ ಅವರು ಕೌಶಂಭಿಯ ಸಿರಾತೂ, ಮಿಶ್ರಾ ಅವರು ಲಖನೌದ ಸರೋಜಿನಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದ ಮೌರ್ಯ ಅವರು ಇತ್ತೀಚೆಗೆ ಎಸ್‌ಪಿ ಸೇರಿದ್ದರು.
ಸಮಾಜವಾದಿ ಪಕ್ಷ ಬುಧವಾರ ಬಿಡುಗಡೆ ಮಾಡಿದ 10 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕಿರಿ ಸೊಸೆ ಅಪರ್ಣಾ ಯಾದವ್ ಅವರಿಗೆ ಲಖನೌ ಕಂಟೋನ್ಮೆಂಟ್ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇವರು 2017ರ ಚುನಾವಣೆಯಲ್ಲಿ ಸೋತಿದ್ದರು.
----
'ಬಿಜೆಪಿಯಿಂದ ನಕಾರಾತ್ಮಕ ರಾಜಕಾರಣ'
ಕೈರಾನಾ ವಲಸೆ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರ ಜೊತೆಗೂಡಿ ಕೈರಾನಾದ ಶಾಮ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲೇಶ್, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು.
'ಬಿಜೆಪಿ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿದೆ. ಎಸ್‌ಪಿ-ಆರ್‌ಎಲ್‌ಡಿ ಸಂಬಂಧವು ಸಹೋದರತ್ವವನ್ನು ಪ್ರತಿನಿಧಿಸುತ್ತದೆ. ಕೈರಾನಾದಿಂದ ಕುಟುಂಬಗಳು ವಲಸೆ ಹೋಗಿದ್ದ ವಿಚಾರ ಪ್ರಸ್ತಾಪಿಸುತ್ತಿರುವವರು, ಚುನಾವಣೆ ಬಳಿಕ ರಾಜ್ಯದಿಂದ ವಲಸೆ ಹೋಗಬೇಕಾಗುತ್ತದೆ' ಎಂದು ತಿರುಗೇಟು ನೀಡಿದ್ದಾರೆ.