ನವದೆಹಲಿ: ಪಾಕಿಸ್ತಾನದ ಪರವಾಗಿ ಟ್ವೀಟ್ ಮಾಡಿ, ಭಾರತದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಹ್ಯುಂಡೈ ಕಂಪೆನಿಗೆ ಇದೀಗ ಭಾರತದಿಂದ ಬಹಿಷ್ಕಾರದ ಬಿಸಿ ತಟ್ಟಿದೆ. 'ಕಾಶ್ಮೀರ ಪ್ರತ್ಯೇಕಿಸುವಲ್ಲಿ ಹೋರಾಟ ಮಾಡಿದ ನಮ್ಮ ಕಾಶ್ಮೀರಿ ಸಹೋದರರನ್ನು ಸ್ಮರಿಸೋಣ, ಮುಂದಿನ ಹೋರಾಟವನ್ನು ಬೆಂಬಲಿಸೋಣ' ಎಂದು ಹ್ಯುಂಡೈ ಟ್ವೀಟ್ ಮಾಡಿತ್ತು.
ಫೆಬ್ರವರಿ 5ನೇ ತಾರೀಖನ್ನು ಪ್ರತಿವರ್ಷವೂ 'ಪಾಕಿಸ್ತಾನ ಕಾಶ್ಮೀರ ದಿನ' ಎಂದು ಆಚರಿಸುತ್ತದೆ. ಈ ದಿನಾಚರಣೆಗೆ ಕಾರಣ, ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದೆ, ಇದರ ವಿಮೋಚನೆ ಅಗತ್ಯ ಎನ್ನುವುದಕ್ಕಾಗಿ. ಇದನ್ನು ಬೆಂಬಲಿಸಿ ಹ್ಯುಂಡೈ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕಿಸುವ ಹಾಗೂ ಭಾರತದ ವಿರುದ್ಧದ ಹೋರಾಟ ಬೆಂಬಿಲಿಸಿ ಟ್ವೀಟ್ ಮಾಡಿ ಈಗ ಪೇಚಿಗೆ ಸಿಲುಕಿದೆ. ಸಾಲದು ಎಂಬುದಕ್ಕೆ ಈ ಕುರಿತು ಹ್ಯುಂಡೈ ಇಂಡಿಯಾ ನಿಲುವ ಕೇಳಿದ ಭಾರತೀಯರ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿತ್ತು.
ಈ ಟ್ವೀಟ್ ಗಮನಿಸಿದ ಭಾರತೀಯರು ತಕ್ಷಣ ಹ್ಯುಂಡೈ ಗ್ಲೋಬಲ್ ಹಾಗೂ ಹ್ಯುಂಡೈ ಇಂಡಿಯಾ ಗಮನಕ್ಕೆ ತಂದಿದ್ದರು. ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದೇ ವೇಳೆ ಟ್ವೀಟ್ ಕುರಿತು ಹ್ಯುಂಡೈ ಇಂಡಿಯಾದ ನಿಲುವೇನು? ಪಾಕ್ ಟ್ವೀಟ್ ಖಂಡಿಸುತ್ತೀರಾ ಎಂದು ಹಲವರು ಪ್ರಶ್ನಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುವ ಬದಲು ನೆಟ್ಟಿಗರ ಖಾತೆಯನ್ನೇ ಹುಂಡೈ ಇಂಡಿಯಾ ಬ್ಲಾಕ್ ಮಾಡಿದೆ!
ಭಾರತದ ವಿರುದ್ಧ ನೀಡಿರುವ ಈ ಹೇಳಿಕೆಗೆ ಭಾರತೀಯರು ಕೆಂಡಾಮಂಡಲವಾಗಿದ್ದು, ಹ್ಯುಂಡೈ ವಿರುದ್ಧ ಅಭಿಯಾನ ಶುರು ಮಾಡಿದ್ದಾರೆ. ನಿಜವಾಗಿ ಭಾರತೀಯರೇ ಆಗಿದ್ದರೆ ಹ್ಯುಂಡೈ ಕಂಪೆನಿಯನ್ನು ಭಾರತದಲ್ಲಿ ಬಹಿಷ್ಕರಿಸಬೇಕು. ನಾವು ಈ ಕಂಪೆನಿಯ ಕಾರುಗಳನ್ನು ತೆಗೆದುಕೊಳ್ಳಬಾರದು ಎಂದು ಅಭಿಯಾನದಲ್ಲಿ ಹೇಳಲಾಗುತ್ತಿದೆ.
ಹ್ಯುಂಡೈ ಇಂಡಿಯಾ ತಪ್ಪನ್ನು ಕೂಡಲೇ ಸರಿಪಡಿಸಬೇಕು. ಭಾರತೀಯರಲ್ಲಿ ಕ್ಷಮೆ ಕೇಳಬೇಕು. ಅಖಂಡ ಭಾರತದಲ್ಲಿ ಪ್ರತ್ಯೇಕತೆ ಕೂಗು ಇಲ್ಲ, ಪಾಕಿಸ್ತಾನ ಪರ ಓಲೈಕೆ ಇಲ್ಲಿ ಅಗತ್ಯವಿಲ್ಲ. ಪಾಕಿಸ್ತಾನವನ್ನು ಬೆಂಬಲಿಸುವ, ಅದರಲ್ಲೂ ಕಾಶ್ಮೀರ ಪ್ರತ್ಯೇಕಿಸುವ ವಾದಕ್ಕೆ ಬೆಂಬಲ ನೀಡುವ ಯಾವ ಕಂಪನಿ, ಸಂಸ್ಥೆಗೆ ಭಾರತದಲ್ಲಿ ಅವಕಾಶವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ದಿನವಿಡೀ ನಡೆದ ಬೈಕಾಟ್‌ನಿಂದಾಗಿ ಕಂಗೆಟ್ಟುಹೋದ ಹ್ಯುಂಡೈ ಕಂಪೆನಿ ಈಗ ತನ್ನ ಟ್ವೀಟ್‌ಗೆ ಕ್ಷಮೆ ಕೋರಿದೆ. ಹ್ಯುಂಡೈ ಮೋಟಾರ್ ಕಳೆದ 25 ವರ್ಷಗಳಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹ್ಯುಂಡೈ ಕಂಪನಿಗೆ ಭಾರತ ಎರಡನೇ ತವರು ನೆಲವಾಗಿದೆ. ನಾವು ರಾಷ್ಟ್ರೀಯತೆಯನ್ನು ಗೌರವಿಸುವ ಬಲವಾದ ನೀತಿ ಹೊಂದಿದ್ದೇವೆ. ಭಾರತದ ವಿರುದ್ಧ ಹೇಳಿಕೆಯನ್ನು ಹ್ಯುಂಡೈ ಇಂಡಿಯಾ ಬಲವಾಗಿ ಖಂಡಿಸುತ್ತದೆ. ನಮ್ಮ ಬದ್ಧತೆಯ ಪ್ರಕಾರ ಭಾರತ ಹಾಗೂ ಭಾರತೀಯರ ಏಳಿಗೆಗಾಗಿ ಹ್ಯುಂಡೈ ಇಂಡಿಯಾ ಶ್ರಮ ಮುಂದುವರಿಸಲಿದೆ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿ ವಿವಾದವನ್ನು ಇಲ್ಲಿಗೇ ತೆರೆ ಎಳೆಯುವ ಪ್ರಯತ್ನ ಮಾಡಿದೆ.