ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸರ್ಕಾರ ತೋರಿಸಿದ್ದಕ್ಕಿಂತಲೂ ಹೆಚ್ಚಿತ್ತಾ?
- ಹೀಗೊಂದು ಅನುಮಾನ ದೇಶದ ಜನತೆಯಲ್ಲಿ ಮೂಡಿದ್ದು, ಒಂದಷ್ಟು ಚರ್ಚೆಗೂ ಕಾರಣವಾಗಿದೆ. ಸಾವಿನ ಲೆಕ್ಕದಲ್ಲೂ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷದ ನಾಯಕರು ಕೂಡ ಆರೋಪ ಮಾಡಿದ್ದೂ ನಡೆದಿದೆ.
2021ರ ನವೆಂಬರ್ ಆರಂಭದವರೆಗೂ ದೇಶದಲ್ಲಿ 32ರಿಂದ 37 ಲಕ್ಷ ಮಂದಿ ಕರೊನಾದಿಂದಾಗಿ ಸಾವಿಗೀಡಾಗಿದ್ದಾರೆ. ಆದರೆ ಸರ್ಕಾರ ಕರೊನಾದಿಂದ ಸತ್ತವರ ಸಂಖ್ಯೆ ಬರೀ 4.6 ಲಕ್ಷ ಎಂದು ಕಡಿಮೆ ಲೆಕ್ಕ ತೋರಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಈ ಸಂಬಂಧ ಕೇಂದ್ರ ಸರ್ಕಾರವು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಮೂಲಕ ಸ್ಪಷ್ಟನೆಯನ್ನು ಹೊರಡಿಸಿದೆ.
ಕೋವಿಡ್ನಿಂದಾಗಿದ್ದೂ ಸೇರಿದಂತೆ ಸಾವಿನ ವರದಿ ದಾಖಲಿಸಿಕೊಳ್ಳಲು ಭಾರತದಲ್ಲಿ ಅತ್ಯುತ್ತಮ ವ್ಯವಸ್ಥೆ ಇದೆ. ಕರೊನಾ ಸಾವಿನ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ಕಡಿಮೆ ಲೆಕ್ಕ ತೋರಿಸಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಗೆ ಬಿಂಬಿಸುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ.
ಕೋವಿಡ್ ಸಾವಿನ ಸಂಖ್ಯೆ ಹೆಚ್ಚಿದೆ ಹೇಳಲು ಬಳಸಲಾದ ಅಂಶಗಳು ಸಮಂಜಸವಾಗಿಲ್ಲ. ಅಲ್ಲದೆ ಸರ್ಕಾರ ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕಾದ್ದರಿಂದ ನಿಖರ ಮಾಹಿತಿಯನ್ನು ಇಟ್ಟುಕೊಳ್ಳಬೇಕಿದೆ ಮತ್ತು ಇದರ ಮೇಲೆ ಸುಪ್ರೀಂ ಕೋರ್ಟ್ ನಿಗಾ ಕೂಡ ಇರುವುದರಿಂದ ಅಂಕಿ-ಅಂಶದಲ್ಲಿ ತಪ್ಪಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ.