ಕಾನ್ಪುರ್ ದೆಹಾತ್: ತ್ರಿವಳಿ ತಲಾಖ್ ವಿರುದ್ಧದ ಕಾನೂನು ಸಾವಿರಾರು ಮುಸ್ಲಿಂ ಮಹಿಳೆಯರ ಕುಟುಂಬಗಳನ್ನು ಛಿದ್ರಗೊಳ್ಳುವುದರಿಂದ ಉಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾನ್ಪುರ್ ದೆಹಾತ್ ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದೂ ಸಹ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ. ಈ ಹಿಂದೆ ಶಾಲೆಗೆ ತೆರಳುವಾಗ ದುಷ್ಕರ್ಮಿಗಳಿಂದ ಹೆಣ್ಣುಮಕ್ಕಳು ಕಿರುಕುಳ ಎದುರಿಸುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಸಮಾಜವಾದಿ ಪಕ್ಷದ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದ್ದು, "ಪ್ರತಿ ಚುನಾವಣೆಯಲ್ಲೂ ವಿರೋಧ ಪಕ್ಷಕ್ಕೆ ಹೊಸ ಪಾಲುದಾರರು ಸಿಗುತ್ತಾರೆ" ಎಂದು ಅಖಿಲೇಶ್ ಯಾದವ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
"ಅವರು ಪ್ರತಿ ಚುನಾವಣೆಯಲ್ಲೂ ಹಳೆಯ ಸಹಚರರನ್ನು ಹೊರಹಾಕುತ್ತಾರೆ. ತಮ್ಮ ಸ್ನೇಹಿತರನ್ನು ಬದಲಾಯಿಸುವವರು ಉತ್ತರ ಪ್ರದೇಶದ ಜನರಿಗೆ ಸೇವೆ ಸಲ್ಲಿಸುತ್ತಾರೆಯೇ?” ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
"ಸಮಾಜವಾದಿ ಪಕ್ಷವು 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡು ಹೋರಾಡುತ್ತಿದೆ. 2017ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು" ಎಂದು ಹೇಳಿದರು.
"ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ ಮೋದಿ, ಪ್ರತಿ ಜಾತಿ, ವರ್ಗ, ಗ್ರಾಮ ಮತ್ತು ನಗರದ ಜನರು ಯುಪಿಯ ತ್ವರಿತ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಮತ ಹಾಕುತ್ತಿದ್ದಾರೆ. ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಬಿಜೆಪಿ ಗೆಲ್ಲಬೇಕೆಂಬ ಹಂಬಲವಿದೆ. ಇನ್ನು ಮುಸ್ಲಿಂ ಸಹೋದರಿಯರು ಮೋದಿಯನ್ನು ಆಶೀರ್ವದಿಸಲು ಮತಗಟ್ಟೆಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ" ಎಂದು ಹೇಳಿದರು.