ನವದೆಹಲಿ: ಕೋವಿಡ್-19 ಲಸಿಕೆಗಳನ್ನು ತಯಾರಿಸುವ ಪ್ರಮುಖ ವಿದೇಶಿ ಔಷಧೀಯ ಕಂಪನಿಗಳು ಭಾರತದಲ್ಲಿ ತಮ್ಮ ಲಸಿಕೆಗಳನ್ನು ಪೂರೈಸಲು ನಷ್ಟ ಪರಿಹಾರ ಮತ್ತು ಸಾರ್ವಭೌಮ ವಿನಾಯಿತಿ ಮನ್ನಾಗೆ ಒತ್ತಾಯಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಹೇಳಿದ್ದಾರೆ. ಆದರೆ ನಮ್ಮ ನಿಯಮಗಳ ಆಧಾರದ ಮೇಲೆ ಈ ಸಂಸ್ಥೆಗಳು ಇಲ್ಲಿ ವ್ಯಾಪಾರ ಮಾಡಲು ಸ್ವಾಗತಾರ್ಹ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಿಯಾಂ ಗಾಂಧಿ ಮೋದಿ ಬರೆದಿರುವ 'ಎ ನೇಷನ್ ಟು ಪ್ರೊಟೆಕ್ಟ್ - ಲೀಡಿಂಗ್ ಇಂಡಿಯಾ ಥ್ರೂ ದಿ ಕೋವಿಡ್ ಕ್ರೈಸಿಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಾಂಡವೀಯಾ, ವಿದೇಶಿ ಫಾರ್ಮಾ ಕಂಪನಿಗಳು ಭಾರತದಲ್ಲಿ ಲಸಿಕೆಗಳನ್ನು ಪೂರೈಸಲು ಬಯಸುತ್ತಿರುವ ಬಗ್ಗೆ ತಿಳಿಸಿದರು.
ವಿದೇಶಿ ಲಸಿಕೆ ತಯಾರಿಕಾ ಕಂಪನಿಗಳು ದೇಶದಲ್ಲಿ ವ್ಯವಹಾರ ಮಾಡಲು ಸ್ವಾಗತಿಸುವ ಬಗ್ಗೆ ಮೊದಲಿನಿಂದಲೂ ನಮಗೆ ಸ್ಪಷ್ಟತೆ ಇತ್ತು. ಆದರೆ ಅದು ಭಾರತದ ಷರತ್ತುಗಳ ಮೇಲೆ ಇರಬೇಕು ಎಂದು ಸಚಿವರು ಪ್ರತಿಪಾದಿಸಿದರು. ಅಂತಹ ವಿದೇಶಿ ಕಂಪನಿಗಳಿಗೆ ನಿಯಮಗಳು ಮತ್ತು ಷರತ್ತು ಹಾಕುವುದರಿಂದ ಸ್ವದೇಶಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಪರಿಕಲ್ಪನೆ ಮತ್ತು ನಿರ್ಣಯವನ್ನು ಬಲಪಡಿಸಲಿದೆ ಎಂದು ಅವರು ಹೇಳಿದರು.
"ಭಾರತವು ಈಗಾಗಲೇ ಮಾನವಶಕ್ತಿ ಮತ್ತು ಬ್ರ್ಯಾಂಡ್ ಶಕ್ತಿ ಹೊಂದಿದ್ದು, ಸಾಮರ್ಥ್ಯವನ್ನು ಗುರುತಿಸುವುದು ಅಗತ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳು ಮತ್ತು ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಪ್ರೇರೇಪಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ದೇಶದಲ್ಲಿ ಕೋವಿಡ್ ಮೂರನೇ ಅಲೆ ಇಳಿಕೆಯಾಗಿದ್ದು, ಸುಮಾರು 175 ಕೋಟಿ ಜನರಿಗೆ ಲಸಿಕೆ ಹಾಕಿರುವುದರಿಂದ ಜಗತ್ತು ಆಶ್ಚರ್ಯಚಕಿತವಾಗಿದೆ ಎಂದು ಮಾಂಡವಿಯಾ ಹೇಳಿದರು.