ಬೆಂಗಳೂರು : ಮಾತೃಭಾಷಾ ದಿನಾಚರಣೆ ಸಂದರ್ಭ ಗಡಿನಾಡ ಕನ್ನಡಿಗರಿಗೆ ಆಘಾತವಾಗುವ ರೀತಿಯಲ್ಲಿ ಕೇರಳದ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ತನ್ನ ಕಳವಳ ವ್ಯಕ್ತಪಡಿಸಿದೆ.
ತಿರುವನಂತಪುರದಲ್ಲಿ ಸೋಮವಾರ ನಡೆದ ಮಲಯಾಳ ಮಿಷನ್ ಮಾತೃಭಾಷಾ ದಿನಾಚರಣೆ ಸಂದರ್ಭ ಮುಖ್ಯಮಂತ್ರಿ ಅವರು, ಮಲಯಾಳ ಭಾಷೆ ತಿಳಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ ಎಂಬ ಹೇಳಿಕೆ ಕೊಡುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಲ್ಲಿ ಆತಂಕವನ್ನುಂಟುಮಾಡಿದ್ದಾರೆ. ಕಾಸರಗೋಡಿನ ಕನ್ನಡಿಗರು ಅಲ್ಲಿನ ಮೂಲ ನಿವಾಸಿಗಳಾಗಿದ್ದು, ಈ ಹಿಂದಿನಂತೆ ಕಾಸರಗೋಡಿನಲ್ಲಿರುವ ಮಲಯಾಳ ಭಾಷೆಯಿಂದ ಇರುವ ವಿನಾಯಿತಿಯನ್ನು ಮುಂದುವರಿಸಬೇಕಾಗಿದೆ.ಮಲಯಾಳ ಅರಿತವರಿಗೆ ಮಾತ್ರ ಸರ್ಕಾರಿ ಉದ್ಯೋಗ ಎಂಬ ಕಾನೂನು ಜಾರಿಗೊಳಿಸಿದರೆ, ಇದು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆಯಾಗಲಿದೆ.
ಕೇರಳ ಸರ್ಕಾರ ಗಡಿನಾಡು ಕಾಸರಗೋಡಿನ ಕನ್ನಡಿಗರ ಸರ್ಕಾರಿ ಉದ್ಯೋಗಕ್ಕೆ ಧಕ್ಕೆಯಾಗುವ ರೀತಿಯ ಯಾವುದೇ ಕ್ರಮ ಕೈಗೊಳ್ಳಬಾರದು. ಕೇರಳ ಸರ್ಕಾರದಿಂದ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆಯಾದಲ್ಲಿ ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಕೇರಳ ಸರ್ಕಾರ ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗುವ ರೀತಿಯಲ್ಲಿ ಮಲಯಾಳ ಭಾಷೆ ಕಡ್ಡಾಯಗೊಳಿಸದಿರುವಂತೆ ನಮ್ಮ ಮುಖ್ಯಮಂತ್ರಿ ಮೂಲಕ ಕೇರಳದ ಮುಖ್ಯಮಂತ್ರಿಯನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.