ಮುಳ್ಳೇರಿಯ: ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ಅರಣ್ಯ ಸಂರಕ್ಷಣಾ ಅಭಿಯಾನದ ಅಂಗವಾಗಿ ಮುಳಿಯಾರಿನಲ್ಲಿ ಕಾಡ್ಗಿಚ್ಚು ತಡೆಗಟ್ಟುವಿಕೆ ಮತ್ತು ಘನತ್ಯಾಜ್ಯ ಸಂಗ್ರಹ ಕಾರ್ಯಾಗಾರ ಇತ್ತೀಚೆಗೆ ಆಯೋಜಿಸಿತ್ತು. ಅರಿಯಿಲ್ ಅರಣ್ಯ ಸಂರಕ್ಷಣಾ ಸಮಿತಿ, ಹಸಿರು ಕ್ರಿಯಾಸೇನೆ ಮತ್ತು ಮುಳಿಯಾರ್ ಪಂಚಾಯತಿ ಸಂಯುಕ್ತವಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ವಿ.ಮಿನಿ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಅರಿಯಿಲ್ ಅರಣ್ಯ ಸಂರಕ್ಷಣಾ ಸಮಿತಿ, ಹಸಿರು ಕ್ರಿಯಾಸೇನೆ, ಸ್ಥಳೀಯರು ಹಾಗೂ ಆರ್‍ಆರ್‍ಟಿ ಸದಸ್ಯರ ಸಹಯೋಗದಲ್ಲಿ ವಳಪ್ಪಾರ ಪ್ರದೇಶದಲ್ಲಿ ಅರಣ್ಯದಿಂದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು. ಅಧ್ಯಕ್ಷೆ ಪಿ.ವಿ.ಮಿನಿ ಮಾತನಾಡಿ, ಅರಣ್ಯ ಇಲಾಖೆ ಅಧೀನದಲ್ಲಿರುವ ಜಮೀನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಎಸೆಯುವವರ ವಿರುದ್ಧ ಪೋಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅರಿಯಿಲ್ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಪಿ.ಶಶಿಧರನ್ ನಾಯರ್ ವಹಿಸಿದ್ದರು. ವಾರ್ಡ್ ಸದಸ್ಯೆ ಸಿ.ನಾರಾಯಣಿಕುಟ್ಟಿ, ಕಾರಡ್ಕ ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ಹಸಿರು ಕ್ರಿಯಾಸೇನಾ ಮುಖಂಡರಾದ ಇ.ಪ್ರಸೀತಾ, ಕೆ.ದಿನೇಶ, ಸುಕುಮಾರನ್ ನಾಯರ್, ಕುಂಞಂಬು ನಾಯರ್ ಮಾತನಾಡಿದರು. ಅರಿಯಿಲ್ ಅರಣ್ಯ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಕೆ.ಜಯಕುಮಾರ್ ಸ್ವಾಗತಿಸಿ, ಖಜಾಂಚಿ ಕೆ.ನಾರಾಯಣನ್ ನಾಯರ್ ವಂದಿಸಿದರು.