ಕಾಸರಗೋಡು: ರಷ್ಯಾದ ಸೇನಾ ದಾಳಿಯಿಂದ ಯೂಕ್ರೇನ್‍ನಲ್ಲಿ ಸಿಲುಕಿಕೊಂಡವರಲ್ಲಿ ಕಾಸರಗೋಡು ಸಿಟಿಸನ್ ನಗರ ನಿವಾಸಿ ರಫೀಕ್ ಎಂಬವರ ಪುತ್ರ ರಿನಾಫ್ ರಫೀಕ್ ಒಳಗೊಂಡಿದ್ದಾರೆ. ಯೂಕೇನ್‍ನ ನ್ಯಾಶನಲ್ ಮೆಡಿಕಲ್ ಕಾಲೇಜಿನಿಲ್ಲಿ ಪ್ರಥಮ ವರ್ಷ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ತಂದೆ ರಫೀಕ್ ಅವರಿಗೆ ಕರೆ ಮಾಡಿದ ರಿನಾಫ್, ರಾತ್ರಿ ವೇಳೆ ಶೆಲ್ ದಾಳಿ ಶಬ್ದ ಹೆಚ್ಚಾಗುತ್ತಿದೆ. ಇದರಿಂದ ಭೀತಿ ಮನೆಮಾಡಿದ್ದು, ನಿದ್ದೆಯೂ ಸರಿಯಾಗಿ ಬೀಳುತ್ತಿಲ್ಲ. ಇದೀಗ ವಿಶ್ರಾಂತಿ ಪಡೆಯಲು ಕೊಠಡಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಮಿನಿಸ್ಟಿಯಾ ಏರಿಯಾದಲ್ಲಿ ರಿನಾಫ್ ಸೇರಿದಂತೆ ಕಾಸರಗೋಡು ಜಿಲ್ಲೆಯ ಕೆಲವರನ್ನೊಳಗೊಂಡ ತಂಡ ವಾಸ್ತವ್ಯ ಹೂಡಿದೆ. ಕುಂಬಳೆ, ಮುಂಡಕೈ, ಪೆರುಂಬಳ, ಚಟ್ಟಂಚಾಲ್, ಕೂಡ್ಲು, ಕಾಞಂಗಾಡು ಆಸುಪಾಸಿನವರೂ ರಿನಾಫ್ ಅವರ ಸಹಪಾಠಿಗಳಾಗಿದ್ದಾರೆ. ಇವರೆಲ್ಲರೂ ಮಿಸ್ಟಿಯಾ ಏರಿಯಾದಲ್ಲೇ ವಾಸಿಸುತ್ತಿದ್ದಾರೆ. ಮಿಸ್ಟಿಯಾ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಚಾನೆಲ್‍ಗಳಲ್ಲಿ ವಾರ್ತೆ ಬರುತ್ತಿದ್ದಂತೆ ಜಂಘಾಬಲ ಹುದುಗಿಹೋಗಿದೆ. ರಾತ್ರಿ ವೇಳೆ ಭಯಾತಂಕದಲ್ಲಿ ಕಳೆಯಬೇಕಾದ ಪರಿಸ್ಥಿತಿಯಿದೆ. ಹಗಲು ಹೊತ್ತಲ್ಲಿ ಅಲ್ಪ ವಿಶ್ರಾಂತಿ ಪಡೆಯುತ್ತೇವೆ ಎಂದು ತಂದೆ ರಫೀಕ್ ಅವರಲ್ಲಿ ಮೊಬೈಲ್ ಸಂಭಾಷಣೆ ವೇಳೆ ತಿಳಿಸಿದ್ದಾರೆ. ನಿನ್ನೆಯಿಂದ ಕರೆ ಮಾಡಿ ಸಂಪರ್ಕಿಸಲು ಯತ್ನಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಶುಕ್ರವಾರ ಬೆಳಗ್ಗೆ 3ಕ್ಕೆ ಆನ್‍ಲೈನ್ ಸಂಪರ್ಕ ಲಭಿಸಿದ್ದು, ಪುತ್ರನೊಂದಿಗೆ ಮಾತನಾಡಿ ಧೈರ್ಯ ತುಂಬಿರುವುದಾಗಿ ರಫೀಕ್ ತಿಳಿಸಿದ್ದಾರೆ. ಜತೆಗೆ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದು, ಇವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದುಬರುತ್ತಿರುವುದಾಗಿ ನೋರ್ಕಾ ಕಚೇರಿ ಸಂಪರ್ಕಿಸಿದಾಗ ಅಧಿಕಾರಿಗಳು ಭರವಸೆ ನೀಡಿರುವುದಾಗಿಯೂ ರಫೀಕ್ ತಿಳಿಸಿದ್ದಾರೆ. ಜಿಲ್ಲಾಡಳಿತದಲ್ಲಿಲ್ಲ ಮಾಹಿತಿ:
ಕಾಸರಗೋಡು ಜಿಲ್ಲೆಯಿಂದ ತೆರಳಿ, ವಿದೇಶ ರಾಷ್ಟ್ರಗಳಲ್ಲಿ ಕೆಲಸ, ಶಿಕ್ಷಣ ಪಡೆಯುತ್ತಿರುವವರ ಬಗ್ಗೆ ಸಮಗ್ರ ಮಾಹಿತಿ ಕಾಸರಗೋಡು ಜಿಲ್ಲಾಡಳಿತದಲ್ಲಿ ಲಭ್ಯವಾಗುತ್ತಿಲ್ಲ. ಯೂಕ್ರೇನ್‍ನಲ್ಲಿ ಯುದ್ಧದ ಕಾರ್ಮುಗಿಲು ದಿನದಿಂದ ದಿನಕ್ಕೆ ದಟ್ಟವಾಗುತ್ತಿದ್ದರೂ, ಜಿಲ್ಲೆಯಿಂದ ಎಚ್ಚು ಮಂದಿ ತೆರಳಿದ್ದಾರೆ, ಅವರ ಸ್ಥಿತಿಗತಿಯ ಬಗ್ಗೆ ಯಾವುದೇ ಮಾಹಿತಿ ಕಾಸರಗೋಡು ಜಿಲ್ಲಾಡಳಿತದಲ್ಲಿ ಲಭ್ಯವಾಗುತ್ತಿಲ್ಲ. ನೋರ್ಕಾ ಮೂಲಕ ಮಾಹಿತಿ ಸಂಗ್ರಹಕ್ಕೆ ಯತ್ನಿಸುತ್ತಿರುವುದಾಗಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎ.ಕೆ ರಮೇಂದ್ರನ್ 'ವಿಜಯವಾಣಿ'ಗೆ ತಿಳಿಸಿದ್ದಾರೆ.