ನವದೆಹಲಿ: ಆಲಿಂಗನದಿಂದ ಸಂಬಂಧ ಮತ್ತು ಬಾಂಧವ್ಯಗಳು ಉತ್ತಮವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರಕ್ಕೆ ತಿವಿದಿದ್ದಾರೆ.
ಪಂಜಾಬ್ ಚುನಾವಣೆಯ ಹಿನ್ನಲೆಯಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಅವರು, 'ಜನರು ನಮ್ಮ (ಕಾಂಗ್ರೆಸ್) ಒಳ್ಳೆಯ ಕೆಲಸವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರು (ಬಿಜೆಪಿ) ಪ್ರಧಾನಿ ಮೋದಿಯವರ ಭದ್ರತೆಯ ವಿಷಯದಲ್ಲಿ ಪಂಜಾಬ್ ಸಿಎಂ ಮತ್ತು ರಾಜ್ಯದ ಜನರನ್ನು ಅವಮಾನಿಸಲು ಪ್ರಯತ್ನಿಸಿದರು ಎಂದು ಹೇಳಿದರು.
ಅಂತೆಯೇ ಮೋದಿ ಸರ್ಕಾರದಲ್ಲಿ ಬಡವರು ಬಡವರಾಗುತ್ತಿರುವಾಗ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಅವರಿಗೆ (ಬಿಜೆಪಿ ನೇತೃತ್ವದ ಸರ್ಕಾರಕ್ಕೆ) ಆರ್ಥಿಕ ನೀತಿಯ ಬಗ್ಗೆ ತಿಳುವಳಿಕೆ ಇಲ್ಲ, ಈ ವಿಷಯ ರಾಷ್ಟ್ರಕ್ಕೆ ಸೀಮಿತವಾಗಿಲ್ಲ, ವಿದೇಶಾಂಗ ನೀತಿಯಲ್ಲೂ ಈ ಸರ್ಕಾರ ವಿಫಲವಾಗಿದೆ, ಚೀನಾ ನಮ್ಮ ಗಡಿಯಲ್ಲಿ ಕುಳಿತಿದೆ. ಅದನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.. ಎಂದು ಕಿಡಿಕಾರಿದ್ದಾರೆ.
ರಾಜಕಾರಣಿಗಳಿಗೆ ಅಪ್ಪುಗೆ ನೀಡುವುದರಿಂದ ಅಥವಾ ಆಹ್ವಾನವಿಲ್ಲದೆ ಬಿರಿಯಾನಿ ತಿನ್ನುವುದರಿಂದ ಸಂಬಂಧಗಳು ಸುಧಾರಿಸುವುದಿಲ್ಲ. ಅವರ (ಬಿಜೆಪಿ ಸರ್ಕಾರದ) ರಾಷ್ಟ್ರೀಯತೆಯು ಬ್ರಿಟನ್‌ನ ಒಡೆದು ಆಳುವ ನೀತಿಯನ್ನು ಆಧರಿಸಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಸಿಂಗ್ ಕಿಡಿಕಾರಿದ್ದಾರೆ.