ಹೋಶಿಯಾರ್‌ಪುರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಕಪ್ಪುಹಣದ ಬಗ್ಗೆ ಹಾಗೂ ನಿರುದ್ಯೋಗದ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಮೋದಿಯಿಂದ ಕೇವಲ ಎರಡು-ಮೂರು ಬಿಲಿಯನೇರ್‌ಗಳು ಮಾತ್ರ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ತಮ್ಮ ಪಕ್ಷದ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಬಡತನವನ್ನು ಅರ್ಥಮಾಡಿಕೊಂಡಿದ್ದಾರೆ. ಚನ್ನಿ ಬಡವರು, ರೈತರು, ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸರ್ಕಾರವನ್ನು ಮುನ್ನಡೆಸುತ್ತಾರೆಯೇ ಹೊರತು ಕೋಟ್ಯಾಧಿಪತಿಗಳಿಗಾಗಿ ಅಲ್ಲ ಎಂದರು.
"ನಮ್ಮ ಮುಂದೆ ಪಂಜಾಬ್ ಚುನಾವಣೆ ಇದೆ. ಇದು ಸಾಮಾನ್ಯ ಚುನಾವಣೆಯಲ್ಲ. ನೀವು ಹೊಸ ಸರ್ಕಾರವನ್ನು ಆಯ್ಕೆ ಮಾಡಬೇಕು". ಇಂದು ದೇಶದಲ್ಲಿ, ಪ್ರತಿ ರಾಜ್ಯದಲ್ಲೂ ನಿರುದ್ಯೋಗ ಹೆಚ್ಚುತ್ತಿದೆ. ನೋಟು ಅಮಾನ್ಯೀಕರಣದ ಸಮಯದಲ್ಲಿ, ಕಪ್ಪುಹಣದ ವಿರುದ್ಧದ ಹೋರಾಟ ಎಂದು ಮೋದಿ ಸರ್ಕಾರ ಹೇಳಿತ್ತು, ಆದರೆ, ಸಣ್ಣ ವ್ಯಾಪಾರಿಗಳು ಮತ್ತು ರೈತರ ಜೇಬಿನಿಂದ ಹಣ ಹೊರತೆಗೆದು ಎರಡು-ಮೂರು ಕೋಟ್ಯಾಧಿಪತಿಗಳಿಗೆ ನೀಡಲಾಯಿತು ಎಂದು ಆರೋಪಿಸಿದರು.
15 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಮೋದಿ ಹೇಳುತ್ತಿದ್ದರು. "ಯುವಕರಿಗೆ 2 ಕೋಟಿ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದರು. ಆದರೆ ಅವರು ಉದ್ಯೋಗ ನೀಡಿದ್ದಾರಾ? ಎಂದು ಜನರನ್ನು ಪ್ರಶ್ನಿಸಿದರು, ಅಲ್ಲದೆ ಮೋದಿ ಉದ್ಯೋಗದ ಬಗ್ಗೆ ಏಕೆ ಮಾತನಾಡುವುದಿಲ್ಲ ಮತ್ತು ಇಂದಿನ ದಿನಗಳಲ್ಲಿ ಕಪ್ಪುಹಣದ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.