ನವೆದಹಲಿ: ಕೆನಡಾದಲ್ಲಿ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿರುವುದರ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರಧಾನಿ ಜಸ್ಟಿನ್ ಟುಡ್ರೊ ಒಟ್ಟಾವಾದಿಂದ ತಮ್ಮ ಕುಟುಂಬದೊಂದಿಗೆ ಪಲಾಯನವಾದ ನಂತರ ಅಲ್ಲಿನ ಪರಿಸ್ಥಿತಿ ಕುರಿತಂತೆ ಭಾರತದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ತಮ್ಮ ಅಭಿಪ್ರಾಯವನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ.
'ವೆಲ್ ಕಮ್ ಟು ಕರ್ಮ ಕೆಫೆ' ಇಲ್ಲಿ ಯಾವುದೇ ಮೆನು (ತಿಂಡಿಯ ವಿವರ ಪಟ್ಟಿ ) ಇಲ್ಲ. ನಿಮ್ಮ ಅರ್ಹತೆಯನುಸಾರ ಸೇವೆ ದೊರೆಯಲಿದೆ. ನೀವು ಎಷ್ಟು ಪ್ರಬಲರಾಗಿದ್ದೀರೋ, ಅದರಂತೆಯೇ ಖಾದ್ಯ ಸ್ವೀಕರಿಸಲಿದ್ದೀರಿ ಎಂದು ಜಸ್ಟಿನ್ ಟುಡ್ರೊ ಅವರನ್ನು ವೆಂಕಟೇಶ್ ಪ್ರಸಾದ್ ಕಾಲೆಳೆದಿದ್ದಾರೆ.
ಜಸ್ಟಿನ್ ಟ್ರುಡೋ ಅವರು ಪ್ರತಿಭಟನೆಗೆ ಹೆದರಿ ಪಲಾಯನ ಮಾಡಿರುವುದು ಭಾರತದಲ್ಲಿಯೂ ಚರ್ಚೆಗೆ ಒಳಗಾಗಿದೆ. ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಟ್ರುಡೋ ಬೆಂಬಲ ವ್ಯಕ್ತಪಡಿಸಿದ್ದರು. ಈ ಪ್ರತಿಭಟನೆಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.
ಈಗ ಟ್ರುಡೋ ಒಂದು ಸಣ್ಣ ಪ್ರತಿಭಟನೆಯನ್ನು ಎದುರಿಸಲು ಸಾಧ್ಯವಾಗದೆ ಹೆದರಿ ಪರಾರಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕಿಸಿದ್ದಾರೆ.