ನಲ್ಗೊಂಡ: ತೆಲಂಗಾಣದಲ್ಲಿ ಖಾಸಗಿ ತರಬೇತಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಮಹಿಳಾ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ.
ತೆಲಂಗಾಣದ ನಲ್ಲಗೊಂಡ ಜಿಲ್ಲೆಯ ಪೆದ್ದವೂರ ಮಂಡಲ ತುಂಗತುರ್ತಿ ಬಳಿ ಖಾಸಗಿ ತರಬೇತಿ ವಿಮಾನವೊಂದು ಪತನಗೊಂಡಿದೆ. ಅಪಘಾತದಲ್ಲಿ ಪೈಲಟ್ ಮತ್ತು ಮಹಿಳಾ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.
ವಿಚಾರ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲದೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಮತ್ತು ವೈದ್ಯಕೀಯ ಸಿಬ್ಬಂದಿ ವಿಮಾನವು ಪ್ಲೈಟೆಕ್ ಏವಿಯೇಷನ್ ಅಕಾಡೆಮಿಗೆ ಸೇರಿದ್ದು ಎಂದು ಗುರುತಿಸಿದ್ದಾರೆ. ತರಬೇತಿ ವಿಮಾನವು ಮಾಚರ್ಲಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮೃತರಲ್ಲಿ ತಮಿಳುನಾಡಿನ ಟ್ರೈನಿ ಪೈಲಟ್ ಕೂಡ ಸೇರಿದ್ದಾರೆ. ದಟ್ಟ ಹೊಗೆಯಿಂದ ಟ್ರೈನಿ ವಿಮಾನ ಹಠಾತ್ತನೆ ಪತನಗೊಂಡಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಫ್ಲೈಟೆಕ್ ಏವಿಯೇಷನ್ ಹಿಂದಿನಿಂದಲೂ ದೂರು
ಫ್ಲೈಟೆಕ್ ಏವಿಯೇಷನ್ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಬಂದಿದ್ದವು. ಆ ಸಮಯದಲ್ಲಿ ಸಿಬಿಐ, ಇಡಿ ಮತ್ತು ಬಿಆರ್‌ಐ ಏಜೆನ್ಸಿಗಳೂ ತನಿಖೆಯಲ್ಲಿದ್ದವು. ತರಬೇತಿಯಲ್ಲಿ ಸರಿಯಾದ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ವಿಮಾನಯಾನ ನಿರ್ದೇಶಕರಿಗೂ ಹಲವು ದೂರುಗಳು ಬಂದಿವೆ. ಎರಡು ವರ್ಷಗಳ ಹಿಂದೆ ಫ್ಲೈಟೆಕ್ ಏವಿಯೇಷನ್ ನಲ್ಲಿ ಡಿಜಿಸಿಐ ತಪಾಸಣೆ ಕೂಡ ನಡೆಸಿತ್ತು.