ನವದೆಹಲಿ :ಅಪರೂಪದ ವಿದ್ಯಮಾನವೊಂದರಲ್ಲಿ, ನವದೆಹಲಿಯ ನ್ಯಾಯಾಲಯದ ಕಲಾಪ ಕೊಠಡಿಯನ್ನು ಪರದೆಯೊಂದನ್ನು ಬಳಸಿ ಇಬ್ಭಾಗಗೊಳಿಸಿದ ನಂತರ 2020 ಈಶಾನ್ಯ ದಿಲ್ಲಿ ಮತೀಯ ಹಿಂಸಾಚಾರ ಸಂಬಂಧಿತ ಕೊಲೆ ಪ್ರಕರಣವೊಂದರ ಏಕೈಕ ಸಾಕ್ಷಿಯೊಬ್ಬರನ್ನು ಅಲ್ಲಿ ಗುರುವಾರ ಹಾಜರುಪಡಿಸಲಾಯಿತು.
ಆರೋಪಿ ಕಟಕಟೆಯಲ್ಲಿ ನಿಂತ ಕಡೆಯೂ ಒಂದು ಪರದೆ ಹಾಕಲಾಗಿತ್ತು. ಕರವಾಲ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣದ ಆರು ಆರೋಪಿಗಳ ಪೈಕಿ ಇಬ್ಬರ ಪರ ಹಾಜರಿದ್ದ ವಕೀಲ ಮೆಹಮೂದ್ ಪ್ರಾಚ, ಈ ಕುರಿತು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ "ದಿಲ್ಲಿ ಹಿಂಸಾಚಾರ ಪ್ರಕರಣದ ಸಾಕ್ಷಿಯೊಬ್ಬರನ್ನು ಈ ರೀತಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಅವರ ಹೇಳಿಕೆ ಪಡೆದುಕೊಂಡಿದ್ದು ಇದೇ ಮೊದಲ ಬಾರಿ, ಆದರೆ ಕಾನೂನಿನನ್ವಯ ಈ ರೀತಿ ಸಾಕ್ಷಿಯನ್ನು ಪರದೆಯ ಹಿಂದಿನಿಂದ ಹಾಜರುಪಡಿಸಲು ಅವಕಾಶವಿಲ್ಲ, ಪ್ರತಿವಾದಿ ವಕೀಲರಲ್ಲಿ ಕೆಲವರು ಇದೇ ವಿಚಾರ ಮುಂದಿಟ್ಟರು ಹಾಗೂ ಅದನ್ನು ಕಲಾಪದಲ್ಲಿ ದಾಖಲಿಸಿಕೊಳ್ಳಬೇಕು" ಎಂದಿದ್ದಾರೆ.
ಸಾಕ್ಷಿಯನ್ನು ಈ ರೀತಿ ಏಕೆ ಹಾಜರುಪಡಿಸಲಾಯಿತು ಎಂಬುದಕ್ಕೆ ನ್ಯಾಯಾಲಯದಲ್ಲಿ ಕಾರಣವನ್ನೂ ನೀಡಲಾಗಿಲ್ಲ.
ಸಾಕ್ಷಿ ಅಜಿತ್ ತೋಮರ್ ಮೂರು ಕೊಲೆ ಪ್ರಕರಣಗಳಲ್ಲಿ ಏಕೈಕ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿದ್ದಾನೆ ಎಂದು ಪ್ರಾಚ ಹೇಳಿದ್ದಾರೆ. ಒಂದು ಪ್ರಕರಣ ಸಂಬಂಧ ಆತನನ್ನು ಮೇಲೆ ತಿಳಿಸಿದ ರೀತಿಯಲ್ಲಿ ಗುರುವಾರ ಹಾಜರುಪಡಿಸಲಾಗಿದೆ. ಈ ನಿರ್ದಿಷ್ಟ ಪ್ರಕರಣ ದಿನೇಶ್ ಎಂಬಾತನ ಸಾವಿಗೆ ಸಂಬಂಧಿಸಿದ್ದಾಗಿದ್ದು ಆತ ಗುಂಡೇಟಿನ ಗಾಯಗಳಿಂದ ಜಿಟಿಬಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಪ್ರಕರಣದ ಚಾರ್ಜ್‍ಶೀಟ್ ಜೂನ್ 16, 2020ರಂದು ಸಲ್ಲಿಸಲಾಗಿತ್ತು.
"ಈ ರೀತಿ ಪರದೆ ಹಾಕಿ ಸಾಕ್ಷಿಗಳನ್ನು ಹಾಜರುಪಡಿಸಲು ಯುಎಪಿಎ ಅಡಿ ಅವಕಾಶವಿದ್ದರೂ ಅದಕ್ಕೂ ನಿರ್ದಿಷ್ಟ ಆದೇಶ ಬೇಕಿದೆ ಹಾಗೂ ಕಾನೂನು ಈ ಕುರಿತು ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಈ ರೀತಿ ಗುರುವಾರ ಮಾಡಿರುವುದು ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆ ಬಗ್ಗೆ ಪ್ರಶ್ನಿಸುವಂತಾಗುತ್ತದೆ ಹಾಗೂ ಪ್ರತಿವಾದಿ ವಕೀಲನಾಗಿ ನನಗೆ ಕೂಡ ಪರದೆಯಾಚೆ ಯಾರಿದ್ದರೆಂದು ತಿಳಿಯುವುದಿಲ್ಲ" ಎಂದರು.