ನವದೆಹಲಿ: ಅಮೆರಿಕಕ್ಕೆ ಪಾಕಿಸ್ತಾನದ ನೂತನ ರಾಯಭಾರಿಯಾಗಿರುವ ಮಸೂದ್ ಖಾನ್ ನೇಮಕವನ್ನು ತಡೆಹಿಡಿದಿರುವುದಕ್ಕೆ ಪಾಕಿಸ್ತಾನ ಇದೀಗ ಭಾರತದ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕುತ್ತಿದೆ. ಭಾರತ ತನ್ನ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಸಿಮ್ ಇಫ್ತಿಕರ್, “ಈ ಎಲ್ಲಾ ವರದಿಗಳು ಆಧಾರರಹಿತವಾಗಿವೆ ಮತ್ತು ಮಸೂದ್ ಖಾನ್ ನೇಮಕಕ್ಕೆ ಸಂಬಂಧಿಸಿದಂತೆ ಯುಎಸ್‌ನಲ್ಲಿ ಪ್ರಕ್ರಿಯೆ ನಡೆಯುತ್ತಿದೆ” ಎಂದು ಮಂಗಳವಾರ ಹೇಳಿದ್ದಾರೆ.
ಭಾರತದ ವಿರುದ್ಧ ಆಕ್ರೋಶ ಏಕೆ?:
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಹಿಜ್ಬುಲ್ ಬೆಂಬಲಿಗ ಮಸೂದ್ ಖಾನ್ ಅವರನ್ನು ಯುಎಸ್‌ನಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ನೇಮಿಸಿತ್ತು. ಆದರೆ ಈ ನೇಮಕವನ್ನು ಅಮೆರಿಕ ಒಪ್ಪಿಕೊಂಡಿಲ್ಲ, ಬದಲಿಗೆ ತಡೆಹಿಡಿದಿದೆ.
ಮಸೂದ್ ಖಾನ್ ಅವರನ್ನು ರಾಯಭಾರಿಯಾಗಿ ಸ್ವೀಕರಿಸದಂತೆ ಅಮೆರಿಕದ ಕಾಂಗ್ರೆಸ್ ಸದಸ್ಯ ಸ್ಕಾಟ್ ಪೆರ್ರಿ, ಅಧ್ಯಕ್ಷ ಜೋ ಬಿಡನ್‌ಗೆ ಪತ್ರ ಬರೆದಾಗ ಈ ವಿಷಯದ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ಪತ್ರದಲ್ಲಿ, “ಪಾಕಿಸ್ತಾನದ ಹೊಸ ರಾಯಭಾರಿಯಾಗಿ ಮಸೂದ್ ಖಾನ್ ಅವರ ಅನುಮೋದನೆಯನ್ನು ವಿದೇಶಾಂಗ ಇಲಾಖೆ ತಡೆಹಿಡಿದಿರುವುದು ಸ್ವಾಗತಾರ್ಹ. ಕೇವಲ ತಡೆ ಹಿಡಿಯುವುದು ಅಷ್ಟೇ ಅಲ್ಲ, ಮಸೂದ್ ಖಾನ್ ಅವರ ನೇಮಕಾತಿಯನ್ನು ನಿರಾಕರಿಸುವಂತೆ ನಾನು ವಿನಂತಿಸುತ್ತೇನೆ. ಈ ಜಿಹಾದಿ ವ್ಯಕ್ತಿಯನ್ನು ಅಮೆರಿಕದ ರಾಯಭಾರಿ ಮಾಡುವ ಪ್ರಯತ್ನವನ್ನು ತಿರಸ್ಕರಿಸಿ. ಮಸೂದ್ ಖಾನ್ ಜಿಹಾದಿ ಬುರ್ಹಾನ್ ವಾನಿ ಸೇರಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಹೊಗಳಿದ್ದಾರೆ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ವಿರುದ್ಧ ನಿರ್ಬಂಧಗಳಿಗಾಗಿ 2017 ರಲ್ಲಿ ಯುಎಸ್ ವಿರುದ್ಧ ಹೇಳಿಕೆ ನೀಡಿದ್ದಾರೆ” ಎಂದು ಬರೆದಿದ್ದಾರೆ.
ಪಾಕಿಸ್ತಾನದ ಪತ್ರಿಕೆಗಳಲ್ಲೂ ಈ ಸುದ್ದಿ ಉಲ್ಲೇಖ:
ಪಾಕಿಸ್ತಾನದ ಪತ್ರಿಕೆಗಳೂ ಈ ಸುದ್ದಿಯನ್ನು ಪ್ರಮುಖವಾಗಿ ಪ್ರಕಟಿಸಿವೆ. ಡಾನ್ ತನ್ನ ವರದಿಯೊಂದರಲ್ಲಿ US ಸಂಸದರ ಪತ್ರವನ್ನು ಉಲ್ಲೇಖಿಸಿದೆ. ಆದರೆ, ಬೈಡನ್ ಗೆ ಬರೆದಿರುವ ಇಂತಹ ಪತ್ರಗಳ ಹಿಂದೆ ಅಮೆರಿಕದಲ್ಲಿರುವ ಭಾರತೀಯರ ಲಾಬಿ ಇದೆ ಎಂದು ಪತ್ರಿಕೆ ವರದಿ ಮಾಡಿದೆ.
ಮಸೂದ್ ಖಾನ್ ಯಾರು?:
ಮಸೂದ್ ಖಾನ್ ಈ ಹಿಂದೆ ಪಾಕ್ ಆಡಳಿತದ ಕಾಶ್ಮೀರದ ಅಧ್ಯಕ್ಷರಾಗಿದ್ದರು. ಈ ಸಮಯದಲ್ಲಿ ಅವರು ಕಾಶ್ಮೀರ ವಿವಾದದ ಬಗ್ಗೆ ಭಾರತದ ವಿರುದ್ಧ ಪಿತೂರಿ ಮಾಡುವ ಕೆಲಸ ಮಾಡಿದರು. ಅವರು ಬೀಜಿಂಗ್, ಹೇಗ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿನ ಪಾಕಿಸ್ತಾನ ಮಿಷನ್‌ಗಳಲ್ಲಿ ವಿವಿಧ ರಾಜತಾಂತ್ರಿಕ ಸ್ಥಾನಗಳನ್ನು ಹೊಂದಿದ್ದಾರೆ.
ಮಸೂದ್ ಚೀನಾಕ್ಕೆ ರಾಯಭಾರಿಯಾಗಿ ಮತ್ತು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರೂ ಆಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರೊಬ್ಬ ಮತಾಂಧನಂತೆ ಬಿಂಬಿತವಾಗುತ್ತಿದ್ದಾರೆ.