ಕಾಸರಗೋಡು: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆಯಲ್ಲಿ ಮಂಗಲ್ಪಾಡಿ ಪಂಚಾಯಿತಿಯಲ್ಲಿನ ತ್ಯಾಜ್ಯ ಸಮಸ್ಯೆ ಪರಿಹರಿಸುವ ಜಿಲ್ಲಾ ಮಟ್ಟದ ಸಭೆ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಐದು ಫ್ಲಾಟ್‍ಗಳಿವೆ. ತ್ಯಾಜ್ಯಗಳನ್ನು ರಸ್ತೆಬದಿಯಲ್ಲಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ಸಮಸ್ಯೆ ಉಲ್ಬಣಗೊಂಡಿದ್ದು ಪರಿಹಾರೋಪಾಯಗಳಿಗೆ ಸಭೆ ಕರೆಯಲಾಗಿತ್ತು. ಎಲ್ಲಾ ಫ್ಲಾಟ್‍ಗಳಲ್ಲಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಅಳವಡಿಸಬೇಕು. ನೈರ್ಮಲ್ಯ ಸೌಲಭ್ಯಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಫ್ಲ್ಯಾಟ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆ ನಿರ್ಧರಿಸಿದೆ. ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳಿಲ್ಲದ ಫ್ಲ್ಯಾಟ್‍ಗಳ ವರ್ಗಾವಣೆ ನೋಂದಣಿ ಸೇರಿದಂತೆ ಪರವಾನಿಗೆ ನೀಡಲಾಗುವುದಿಲ್ಲ ಎಂದು ಜಿಲ್ಲಾ ನೋಂದಣಾಧಿಕಾರಿ ಸಭೆಗೆ ತಿಳಿಸಿದರು. ಜಮೀನು ಕಟ್ಟಡ ನೋಂದಣಿಗೆ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ನೈರ್ಮಲ್ಯ ಮಿಷನ್ ಸಂಯೋಜಕರ ಪ್ರಮಾಣಪತ್ರದ ಅಗತ್ಯವಿದೆ ಎಂದು ಸಭೆಗೆ ತಿಳಿಸಲಾಯಿತು.
ಫೆಬ್ರುವರಿ 28ರೊಳಗೆ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳನ್ನು ಪರಿಹರಿಸಲು ಪ್ರಸ್ತಾಪಿಸಲಾಗಿದೆ. ಇಲ್ಲವಾದಲ್ಲಿ ಸಂಬಂಧಪಟ್ಟ ಪೋಲೀಸ್ ಇನ್ಸ್ ಪೆಕ್ಟರ್ ಫ್ಲಾಟ್ ಗಳಲ್ಲಿ ವಾಸವಾಗಿರುವ ಬಾಡಿಗೆದಾರರಿಗೆ ನೊಟೀಸ್ ನೀಡಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ಜಿಲ್ಲಾ ನೈರ್ಮಲ್ಯ ಮಿಷನ್‍ನ ಪ್ರಮಾಣಪತ್ರಗಳನ್ನು ಪಡೆಯಬೇಕು. ಆಯಾ ಸ್ಥಳಗಳಲ್ಲಿ ಸ್ಥಳೀಯರ ಸಭೆ ನಡೆಸಿ ಸಹಕಾರ ನೀಡಲು ತಿಳಿಸಲಾಗುವುದು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಪಂಚಾಯತ್ ಉಪನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ನೋಂದಣಾಧಿಕಾರಿ ಹಕೀಂ, ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ, ನೈರ್ಮಲ್ಯ ಮಿಷನ್ ಜಿಲ್ಲಾ ಸಂಯೋಜಕಿ ಲಕ್ಷ್ಮಿ ಉಪಸ್ಥಿತರಿದ್ದರು.