ಬದಿಯಡ್ಕ: ವೇದ, ಸಂಗೀತ, ಮತ್ತು ಯೋಗ ಮೂರೂ ವಿದ್ಯೆಗಳನ್ನು ಸಮೀಕರಿಸಿಕೊಂಡು ಕಳೆದ ಅನೇಕ ವರ್ಷಗಳಿಂದ ಹಲವಾರು ವಿದ್ಯಾರ್ಥಿಗಳನ್ನು ರೂಪಿಸಿದ ನಾರಾಯಣೀಯಂನ ವೀಣಾವಾದಿನಿ ಸಂಸ್ಥೆಯು ರಾಜ್ಯಕ್ಕೇ ಹೆಮ್ಮೆಯಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು.
ಬದಿಯಡ್ಕ ಸಮೀಪದ ನಾರಾಯಣೀಯಂ ಸಂಸ್ಥೆಯ ವೀಣಾವಾದಿನಿ ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭೇಟಿ ನೀಡಿ ಅವರು ಮಾತನಾಡಿದರು.
ಸಂಗೀತ ಮತ್ತು ಕಲೆಗೆ ನಮ್ಮ ಅಸ್ಮಿತೆಯ ಮೇರು ದ್ಯೋತಕಗಳಾಗಿವೆ. ಅಂತಹ ಜ್ಞಾನಕಾಶಿಯನ್ನು ನವ ಸಮಾಜಕ್ಕೆ ದಾಟಿಸುವ ಕೈಂಕರ್ಯದಲ್ಲಿ ಮುಂದುವರಿದಿರುವ ವೀಣಾವಾದಿನಿ ಕಾಸರಗೋಡಿನ ಹೆಮ್ಮೆ. ಓರ್ವ ಸಂಸದನಾಗಿ ನನ್ನ ನೆಲೆಯಿಂದ ಬೇಕಾದ ಎಲ್ಲಾ ನೆರವನ್ನೂ ಒದಗಿಸಲು ಮುಂದೆ ಬರುವುದಾಗಿ ಅವರು ತಿಳಿಸಿದರು.
ವೀಣಾವಾದಿನಿಯಲ್ಲಿ ಮಂಗಳವಾರದಿಂದ ಸಂಗೀತ, ಯೋಗ, ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿದೆ. ಮಂಗಳೂರು, ಕಾಸರಗೋಡು, ಮಧೂರು, ಪೆರ್ಲ ಹಾಗೂ ವೀಣಾವಾದಿನೀ (ನಾರಾಯಣೀಯಂ) ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಜೊತೆಸೇರಿ ಕಾರ್ಯಕ್ರಮಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಸಂಗೀತ ಕಛೇರಿಯೊಂದಿಗೆ ಹಿರಿಯರ ಸಂಗೀತ ಕಛೇರಿಯೂ ಜರಗಿತು. ವೀಣಾವಾದಿನೀ ಸಂಗೀತ ಶಾಲೆಯ ಸಂಯೋಜಕರಾದ ವಿದ್ವಾನ್ ಬಳ್ಳಪದವು ಯೋಗೀಶಶರ್ಮ ಮತ್ತು ವೇದದ ಗುರುಗಳಾದ ಕೃಷ್ಣನ್ ನಂಬೂದಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.