ನವದೆಹಲಿ :ಲೋಕಸಭೆ ಮತ್ತು ರಾಜ್ಯಸಭೆಯ ನೇರಪ್ರಸಾರಗಳನ್ನು ಮತ್ತು ರೆಕಾರ್ಡ್ ಮಾಡಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಸಂಸದ್ ಟಿವಿಯ ಖಾತೆಯನ್ನು ಯೂಟ್ಯೂಬ್ ತೆಗೆದುಹಾಕಿದೆ ಎಂದು ತಿಳಿದು ಬಂದಿದೆ. ಯೂಟ್ಯೂಬ್ ನ ಸಾಮುದಾಯಿಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸಂಸದ್ ಟಿವಿಯನ್ನು ತೆಗೆದುಹಾಕಲಾಗಿದೆ ಎಂದು Indianexpress.com ವರದಿ ಮಾಡಿದೆ.
ಸಂಸದ್ ಚಾನೆಲ್ ನ ಯೂಟ್ಯೂಬ್ ಚಾನೆಲ್ ನಿಂದ ಯಾವ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬುವುದು ಇದುವರೆಗೆ ಸ್ಪಷ್ಟವಾಗಿಲ್ಲ. ಈ ಕುರಿತು ಗೂಗಲ್ ಗೆ ಇಮೇಲ್ ಮಾಡಲಾಗಿದ್ದು, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ತಿಳಿಸಿದೆ. ಸಂಸದ್ ಟಿವಿ ಚಾನೆಲ್ ಅನ್ನು ಸರ್ಚ್ ಮಾಡುವ ವೇಳೆ ಎರರ್ 404 ಎಂದು ತೋರಿಸಿದ್ದು, ಈ ಪುಟವು ಲಭ್ಯವಿಲ್ಲ, ಕ್ಷಮಿಸಿ, ಬೇರೆನನ್ನಾದರೂ ಹುಡುಕಲು ಪ್ರಯತ್ನಿಸಿ ಎಂದು ಬರೆದಿರುವುದಾಗಿ ತಿಳಿದುಬಂದಿದೆ.
ಯೂಟ್ಯೂಬ್ ಪ್ರಕಾರ, ಅದರ ಸಮುದಾಯ ಮಾರ್ಗಸೂಚಿಗಳು ಯೂಟ್ಯೂಬ್ ನಲ್ಲಿ "ಯಾವ ರೀತಿಯ ವಿಷಯವನ್ನು ಅನುಮತಿಸಲಾಗುವುದಿಲ್ಲ" ಎಂಬುದನ್ನು ವಿವರಿಸುತ್ತದೆ ಮತ್ತು ವೀಡಿಯೊಗಳು, ವೀಡಿಯೊಗಳಲ್ಲಿನ ಕಾಮೆಂಟ್‌ಗಳು ಮತ್ತು ಲಿಂಕ್‌ಗಳು ಮತ್ತು ಥಂಬ್‌ನೇಲ್‌ಗಳು ಸೇರಿದಂತೆ ಎಲ್ಲಾ ರೀತಿಯ ವಿಷಯಗಳಿಗೆ ಅನ್ವಯಿಸುತ್ತದೆ.