ಬದಿಯಡ್ಕ/ಕುಂಬಳೆ: ಕುಂಬಳೆ ಮುಳ್ಳೇರಿಯ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ವಿವಿಧೆಡೆಗಳ ತಿರುವುಗಳನ್ನು ತೆರವುಗೊಳಿಸುವ ಪ್ರಕ್ರಿಯೆ, ಮಳೆ ನೀರು ಸಂಚರಿಸುವ ಪುಟ್ಟ ಮೋರಿಗಳ ನಿರ್ಮಾಣ ಮೊದಲಾದ ಚಟುವಟಿಕೆಗಳು ಪ್ರಗತಿಯಲ್ಲಿದೆ.
ರೀಬಿಲ್ಡ್ ಕೇರಳ ಯೋಜನೆಯ ಭಾಗವಾಗಿ ಕುಂಬಳೆ-ಮುಳ್ಳೇರಿಯ 29 ಕಿಲೋಮೀಟರ್ ರಸ್ತೆ ಕಾಮಗಾರಿ ಕೆಎಸ್‍ಟಿಪಿ (ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಪ್ರಾಜೆಕ್ಟ್)ಉಸ್ತುವಾರಿಯಲ್ಲಿ 158 ಕೋಟಿ.ರೂಗಳನ್ನು ವ್ಯಯಿಸಿ ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವ ಕಾರ್ಯ ನಡೆಯುತ್ತಿದೆ. ಮೋರಿ ಸಂಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.
ಇದೇ ವೇಳೆ ಪೆರಡಾಲ ಹೊಳೆಗೆ ಈ ರಸ್ತೆಯ ಮಡಿಪ್ಪು ಎಂಬಲ್ಲಿ ಸೇತುವೆಯಿದೆ. ನೂತನ ರಸ್ತೆ ನಿರ್ಮಾಣವಾಗುವ ಸಂದರ್ಭದಲ್ಲಿ ಪೆರಡಾಲ ಸೇತುವೇ ಏನಾಗಲಿದೆ ಎಂಬುದು ಹಲವರ ಕುತೂಹಲವಾಗಿದೆ. ಈಗಾಗಲೇ ಸೇತುವೆಯ ಅಡಿಭಾಗದಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಪ್ರಸ್ತುತ ಕಾಮಗಾರಿಯ ಸಂದರ್ಭದಲ್ಲಿ ಪೆರಡಾಲ ಸೇತುವೆಯ ದುರಸ್ಥಿ ಅಥವಾ ಹೊಸ ಸೇತುವೆ ನಿರ್ಮಾಣದ ಬಗ್ಗೆ ಯೋಜನೆಯಲ್ಲಿ ಅವಕಾಶವಿಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ. ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಸೇತುವೆಯನ್ನು ಈಗ ಇರುವ ರೀತಿಯಲ್ಲಿಯೇ ಮುಂದುವರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಬದಿಯಡ್ಕದಿಂದ ಕನ್ನೆಪ್ಪಾಡಿಯ ವಿವಿಧೆಡೆಗಳಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಗುಡ್ಡವು ಜರಿದು ಬಿದ್ದು ರಸ್ತೆ ಹಾಳಾಗದಂತೆ ಆಳೆತ್ತರದ ತಡೆಗೋಡೆ ನಿರ್ಮಿಸಲಾಗಿದೆ. ರಸ್ತೆ ಬದಿಯ ವಿದ್ಯುತ್ ಲೈನ್ ಗಳು, ಟ್ರಾನ್ಸ್‍ಫರ್ ಮಾರ್ ಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಧೂಳೆದ್ದು ಸಮಸ್ಯೆ ಸೃಷ್ಟಿ: ಕೆಮ್ಮು, ಅಲರ್ಜಿ:
ಕಾಮಗಾರಿಯ ಮೊದಲ ಹಂತದಲ್ಲಿ ಕುಂಬಳೆ-ಸೀತಾಂಗೋಳಿ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಅ|ಧಿಕೃತರು ತಿಳಿಸಿದ್ದಾರೆ. ಇದರ ಭಾಗವಾಗಿ ಕುಂಬಳೆ ಶಾಂತಿಪಳ್ಳ ಪರಿಸರದಿಂದ ಸೂರಂಬೈಲು ವರೆಗೆ ಈಗಾಗಲೇ ಭಾರೀ ಪ್ರಮಾಣದಲ್ಲಿ ರಸ್ತೆ ಇಕ್ಕೆಲಗಳನ್ನು ಕಡಿದು ಹದಗೊಳಿಸಲಾಗುತ್ತಿದ್ದು, ನಾರಾಯಣಮಂಗಲ, ನಾೈಕ್ಕಾಪು ವರೆಗೆ ಧೂಳುಮಯಗೊಂಡಿದ್ದು, ವಾಹನ ಚಾಲಕರು, ಪ್ರಯಾಣಿಕರಿಗೆ ದೊಡ್ಡ ಪ್ರಮಾಣದ ಸವಾಲುಗಳು ಎದುರಾಗಿದೆ. ಕೆಮ್ಮು, ಅಲರ್ಜಿ, ವಾಂತಿ ಸಾಮಾನ್ಯವಾಗಿದೆ. ರಸ್ತೆ ಇಕ್ಕೆಲಗಳಲ್ಲಿರುವ ಮನೆಗಳಿಗೂ ಸಮಸ್ಯೆಗಳು ಕಂಡುಬಂದಿದೆ. ವಾಹನಗಳ ಗ್ಲಾಸ್, ಯಂತ್ರಗಳಿಗೂ ತೊಂದರೆಗಳಾಗುತ್ತಿರುವ ಬಗ್ಗೆ ದೂರಲಾಗಿದೆ.
ನೀರಿನ ಅಲಭ್ಯತೆ:
ಮಣ್ಣು ಅಗೆದಿರುವುದರಿಂದ ಧೂಳು ಏಳುವುದು ಸಹಜವಾಗಿದ್ದರೂ, ನೀರು ಚಿಮುಕಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದಾದರೆ. ಆದರೆ ಈ ಪ್ರದೇಶಗಳಲ್ಲಿ ನೀರಿನ ತೀವ್ರ ಕೊರತೆ ಇದೆ. ಬೇಸಿಗೆ ಪ್ರವೇಶಿಸಿರುವುದರಿಂದ ಕುಡಿಯುವ ನೀರಿಗೂ ತತ್ವಾರವಿರುವ ಹೊತ್ತಿಗೆ ರಸ್ತೆಗೆ ಚಿಮುಕಿಸಲು ನೀರು ಲಭ್ಯವಾಗುವುದು ಅನೂಹ್ಯ. ಈ ಕಾರಣದಿಂದ ಕೆ.ಎಸ್.ಟಿ.ಪಿಯೂ ಒತ್ತಡದಲ್ಲಿದೆ. ಶಿರಿಯಾ ಹೊಳೆಯ ಅಣೆಕಟ್ಟಿನಿಂದ ನೀರು ಲಭ್ಯವಿದ್ದರೂ ಅದು ಉಪ್ಪು ನೀರಾಗಿರುವುದರಿಂದ ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಬಳಸಲು ಅನುಮತಿಸಲಾಗದು ಎಂದು ಕೆ.ಎಸ್.ಟಿ.ಪಿ ತಿಳಿಸಿದೆ. ಈ ಮಧ್ಯೆ ನೀರಿನ ಹುಡುಕಾಟ ಪ್ರಗತಿಯಲ್ಲಿದೆ.
ಅಭಿಮತ:
ಧೂಳಿನ ವ್ಯಾಪಕ ಸಮಸ್ಯೆ ಇರುವುದು ನಿಜ. ಆದರೆ ನೀರಿನ ಕೊರತೆ ಇರುವುದರಿಂದ ಪರಿಹಾರ ಕಲ್ಪಿಸಲು ಸವಾಲುಗಳುಂಟಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ನೀರಾವರಿ ಇಲಾಖೆಯ ಅ|ಧಿಕೃತರಿಗೆ ಸಮಸ್ಯೆ ತಿಳಿಸಿದ್ದರೂ ಅವರು ಕೃಷಿಯೇತರ ವಿಭಾಗಗಳಿಗೆ ನೀರು ವಿತರಿಸಲು ಒಪ್ಪಿಗೆ ನೀಡಿಲ್ಲ. ಇದರಿಂದ ಇತರ ಜಲಮೂಲಗಳ ಹುಡುಕಾಟ ನಡೆಯುತ್ತಿದೆ. ಸಾರ್ವಜನಿಕರು ಈ ಬಗ್ಗೆ ಕೆಎಸ್ ಟಿ ಪಿಗೆ ಸಲಹೆ ನೀಡಿದರೆ ಸ್ವೀಕರಿಸಲಾಗುವುದು.
-ಸಚಿನ್
ಪಿ ಆರ್ ಒ(ಕೆಎಸ್‍ಟಿಪಿ:ಕುಂಬಳೆ -ಮುಳ್ಳೇರಿಯ ನಿರ್ಮಾಣ ವಲಯ)