ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿ.ವಿಯಲ್ಲಿ ಚರ್ಚೆ ನಡೆಸಲು ಬಯಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.
ರಷ್ಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು, 'ನರೇಂದ್ರ ಮೋದಿ ಅವರೊಂದಿಗೆ ದೂರದರ್ಶನದಲ್ಲಿ ಚರ್ಚಿಸಲು ಇಷ್ಟಪಡುತ್ತೇನೆ. ಈ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬಹುದಾಗಿದೆ. ಇದರಿಂದ ಉಪಖಂಡದ ಶತಕೋಟಿ ಜನರಿಗೆ ಉಪಯೋಗ ಆಗಲಿದೆ' ಎಂದಿದ್ದಾರೆ.
ಭಾರತದೊಂದಿಗೆ ಪ್ರತಿಕೂಲ ಹೆಚ್ಚಿದಂತೆ ಅದರ ನಡುವಿನ ವ್ಯಾಪಾರವೂ ಕಡಿಮೆಯಾಯಿತು. ಎಲ್ಲಾ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದುವುದು ನಮ್ಮ ಸರ್ಕಾರದ ನೀತಿಯಾಗಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್ ಬಿಕ್ಕಟ್ಟು ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಇಮ್ರಾನ್, ನಾವು ರಷ್ಯಾದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆಯೂ ಆರ್ಥಿಕ ಮತ್ತು ವ್ಯಾಪಾರ ಸಹಕಾರ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲು ಇದೇ 23, 24ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮೊದಲ ಬಾರಿಗೆ ರಷ್ಯಾಗೆ ಭೇಟಿ ನೀಡಲಿದ್ದಾರೆ.