ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಗೆ ಇಂದಿಗೆ (ಫೆ.14) ಮೂರು ವರ್ಷವಾಗಿದೆ. ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
'2019ರ ಈ ದಿನ ಪುಲ್ವಾಮಾದಲ್ಲಿ ಹುತಾತ್ಮರಾದ ಎಲ್ಲರಿಗೂ ಗೌರವ ಸಲ್ಲಿಸುತ್ತಿದ್ದೇನೆ. ದೇಶಕ್ಕೆ ಅವರು ನೀಡಿದ ಅತ್ಯದ್ಭುತ ಕೊಡುಗೆಯನ್ನು ಸ್ಮರಿಸುತ್ತೇನೆ. ಅವರ ಶೌರ್ಯ ಮತ್ತು ಅತ್ಯುನ್ನತ ತ್ಯಾಗವು ಪ್ರತಿಯೊಬ್ಬ ಭಾರತೀಯನೂ ಬಲಿಷ್ಠ ಮತ್ತು ಸಮೃದ್ಧ ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
'ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ ಅತ್ಯುನ್ನತ ತ್ಯಾಗವನ್ನು ಮಾಡುವ ಮೂಲಕ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿದ ಸಿಆರ್‌ಪಿಎಫ್‌ನ ವೀರ ಯೋಧರಿಗೆ ಹೃತ್ಪೂರ್ವಕ ನಮನಗಳು. ನಿಮ್ಮ ತ್ಯಾಗಕ್ಕೆ ದೇಶ ಸದಾ ಋಣಿಯಾಗಿರುತ್ತದೆ. ನಿಮ್ಮ ಶೌರ್ಯವು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
'ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ತಾಯಿ ಭಾರತಿಯ ಅಮರ ವೀರ ಪುತ್ರರಿಗೆ ನೂರಾರು ನಮನಗಳು ಮತ್ತು ನಮ್ರ ನಮನಗಳು. ನಿಮ್ಮ ತ್ಯಾಗಕ್ಕೆ ಸಮಾಜವು ಋಣಿಯಾಗಿದೆ. ನಿಮ್ಮ ತ್ಯಾಗ ನಮ್ಮೆಲ್ಲರನ್ನೂ ಭಯೋತ್ಪಾದನೆಯ ವಿರುದ್ಧ ಒಗ್ಗೂಡಿಸುತ್ತದೆ. ಜೈ ಹಿಂದ್' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
'2019ರಲ್ಲಿ ಈ ದಿನದಂದು ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಹುತಾತ್ಮರಿಗೆ ನಮಿಸುತ್ತೇನೆ. ಮಾತೃಭೂಮಿಯ ಸಾರ್ವಭೌಮತ್ವ ರಕ್ಷಿಸಲು ಅವರು ತೋರಿದ ಅಸಾಧಾರಣ ಧೈರ್ಯ ಮತ್ತು ಸರ್ವೋಚ್ಚ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಜೈ ಹಿಂದ್' ಎಂದು ಕರ್ನಾಟಕದ ಆರೋಗ್ಯ ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.