ಗುವಾಹತಿ: ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೊಂದು ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡುವುದು ವಿಶೇಷವೇನಲ್ಲ; ಆದರೆ ಮೇಘಾಲಯ ಸಿಎಂ ಕೊನ್ರಾಡ್ ಸಂಗ್ಮಾ ಅವರ ನಡೆ ಮಾತ್ರ ಕುತೂಹಲಕಾರಿ.
ಮೇಘಾಲಯ ಸಿಎಂ ಇದೀಗ ಮಣಿಪುರಕ್ಕೆ ನಾಲ್ಕು ದಿನಗಳ ಭೇಟಿಗೆ ಆಗಮಿಸಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟದ ವಿರುದ್ಧ ಪ್ರಚಾರ ನಡೆಸಲಿದ್ದಾರೆ.
ಮಣಿಪುರದಲ್ಲಿ 2017ರ ಚುನಾವಣೆಯಲ್ಲಿ ಕೇವಲ 9 ಸ್ಥಾನಗಳಿಗೆ ಸ್ಪರ್ಧಿಸಿದ್ದ ಎನ್‌ಪಿಪಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡು ಕಿಂಗ್‌ಮೇಕರ್ ಆಗಿತ್ತು. ಎನ್‌ಪಿಪಿ ಬೆಂಬಲವಿಲ್ಲದಿದ್ದರೆ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸುವುದು ಸಾಧ್ಯವಿರಲಿಲ್ಲ. ಆದರೆ ಈ ಬಾರಿ ಎನ್‌ಪಿಸಿ 60 ಸ್ಥಾನಗಳ ಪೈಕಿ 42ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟು ಪಕ್ಷಾಂತರ ಮಾಡಿರುವ 19 ಮಂದಿ ಮುಖಂಡರಿಗೆ ಎನ್‌ಪಿಪಿ ಟಿಕೆಟ್ ನೀಡಿದೆ. ಆದರೆ ಎನ್‌ಪಿಪಿಯಿಂದ ಹಾನಿಯಾಗುವ ಸಾಧ್ಯತೆಯನ್ನು ಬಿಜೆಪಿ ಕಡೆಗಣಿಸಿದೆ.
"ಮಣಿಪುರದಲ್ಲಿ ಬಿಜೆಪಿಗೆ ಪರ್ಯಾಯವಾಗುವ ಕನಸನ್ನು ಎನ್‌ಪಿಪಿ ಕಾಣುತ್ತಿದೆ. ಈ ಚುನಾವಣೆ ಬಳಿಕ ಎನ್‌ಪಿಪಿಗೆ ಅಸ್ತಿತ್ವವೇ ಇರುವುದಿಲ್ಲ. ಮಣಿಪುರದಲ್ಲಿ ಅವರಿಗೆ ಸಂಘಟನೆಯ ಬಲವೇ ಇಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರು ಬರುತ್ತಾರೆ" ಎಂದು ಮಣಿಪುರ ಬಿಜೆಪಿ ಉಪಾಧ್ಯಕ್ಷ ಚಿದಾನಂದ ಸಿಂಗ್ ಹೇಳಿದ್ದಾರೆ.
ಬಿಜೆಪಿ ಎಲ್ಲ 60 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ 16 ಮಂದಿ ಶಾಸಕರ ಪೈಕಿ 10 ಮಂದಿ ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎನ್‌ಪಿಪಿಯ ಉಪಮುಖ್ಯಮಂತ್ರಿ ಯುಮ್ನಮ್ ಜೋಯ್ ಕುಮಾರ್ ಸಿಂಗ್ ಅವರು ಚುನಾವಣಾ ರ್ಯಾಲಿಗಳಲ್ಲಿ ತಮ್ಮದೇ ಸರ್ಕಾರದ ಭಾಗವಾಗಿರುವ ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಮಣಿಪುರದಲ್ಲಿ ಪಕ್ಷದ ಸಾಧನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಗ್ಮಾ ಗಂಭೀರ ಪ್ರಯತ್ನ ನಡೆಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಡುತ್ತಾರೆ.