ನವದೆಹಲಿ :ಗ್ರಾಹಕ ಆಯೋಗಗಳ ಮೂಲಸೌಕರ್ಯ ಸುಧಾರಣೆಗಾಗಿ ಹಂಚಿಕೆಯಾಗಿರುವ ನಿಧಿಯ ಸುಗಮ ಬಳಕೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಹೊರಡಿಸಿದ್ದ ಆದೇಶವನ್ನು ಪಾಲಿಸದಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತರಾಟೆಗೆತ್ತಿಕೊಂಡಿತು.
ನವದೆಹಲಿ :ಗ್ರಾಹಕ ಆಯೋಗಗಳ ಮೂಲಸೌಕರ್ಯ ಸುಧಾರಣೆಗಾಗಿ ಹಂಚಿಕೆಯಾಗಿರುವ ನಿಧಿಯ ಸುಗಮ ಬಳಕೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಹೊರಡಿಸಿದ್ದ ಆದೇಶವನ್ನು ಪಾಲಿಸದಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತರಾಟೆಗೆತ್ತಿಕೊಂಡಿತು.
'ನಿಮಗೆ ಅರ್ಥವಾಗುವಂತೆ ಮಾಡಲು ನಾವು ಕರುಣೆಯಿಲ್ಲದವರಾಗಬೇಕು 'ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ ಅವರ ಪೀಠವು ಅನುಸರಣಾ ಪ್ರಮಾಣಪತ್ರ ಸಲ್ಲಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ಲ.ರೂ.ಗಳ ದಂಡವನ್ನು ವಿಧಿಸಿತು.
ಡಿ.1ರಂದು ಹೊರಡಿಸಿದ್ದ ತನ್ನ ಆದೇಶದಲ್ಲಿ ಜಿಲ್ಲಾ ಮತ್ತು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಹಣವನ್ನು ಮೀಸಲಿಟ್ಟಿದ್ದ ಸರ್ವೋಚ್ಚ ನ್ಯಾಯಾಲಯವು,ಹಣವು ವಾಪಸಾಗದಂತೆ ಅಗತ್ಯವಿರುವ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿತ್ತು.
ಹಣವನ್ನು ಪರಿಣಾಮಕಾರಿಯಾಗಿ ಬಳಸಲು ಅಧಿಕಾರಯುತ ಸಮಿತಿಗಳೊಂದಿಗೆ ಸಮನ್ವಯಕ್ಕಾಗಿ ಮತ್ತು ಅವುಗಳಿಗೆ ನೆರವಾಗಲು ಒಂದು ವಾರದೊಳಗೆ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆಯೂ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿತ್ತು. ನ್ಯಾಯಾಲಯವು ನಿಗದಿಗೊಳಿಸಿದ್ದ ವೇಳಾಪಟ್ಟಿಯತ್ತ ರಾಜ್ಯಗಳು ಗಮನ ಹರಿಸಿಲ್ಲ ಎಂದು ಬುಧವಾರ ಹೇಳಿದ ಪೀಠವು,ಗಡುವಿನ ಮಹತ್ವವನ್ನು ತಾನು ಉಲ್ಲೇಖಿಸಿದ್ದರಿಂದ ವಿಷಯಗಳು ಬದಲಾಗುತ್ತವೆ ಎಂದು ತಾನು ನಿರೀಕ್ಷಿಸಿದ್ದೆ ಎಂದು ಹೇಳಿತು.
ನಿಗದಿತ ಗಡುವಿನೊಳಗೆ ಆದೇಶವನ್ನು ಪಾಲಿಸದಿರುವ ಪರಿಣಾಮಗಳನ್ನು ರಾಜ್ಯಗಳು ಭರಿಸಲೇಬೇಕು ಎಂದೂ ಪೀಠವು ಹೇಳಿತು.
22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಸರಣಾ ವರದಿಗಳನ್ನು ಸಲ್ಲಿಸಿವೆ ಮತ್ತು 12 ರಾಜ್ಯಗಳು ಇನ್ನಷ್ಟೇ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕಿವೆ ಎಂದು ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವಾಗುತ್ತಿರುವ ಅಮಿಕಸ್ ಕ್ಯೂರಿ ಆದಿತ್ಯ ನಾರಾಯಣ ಹೇಳಿದರು. ತನ್ನ ಆದೇಶಗಳನ್ನು ಪಾಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಾಲ್ಕು ವಾರಗಳ ಹೆಚ್ಚುವರಿ ಗಡುವನ್ನು ನೀಡಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಎ.22ಕ್ಕೆ ನಿಗದಿಗೊಳಿಸಿತು.
ಆದೇಶಗಳ ಪಾಲನೆಯಾಗದಿದ್ದರೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಪೀಠವು ತಿಳಿಸಿತು.