ನವದೆಹಲಿ: ಐದು ವರ್ಷಗಳಿಗೆ ರೂ. 1.600 ಕೋಟಿ ರೂ. ಬಜೆಟ್ ನೊಂದಿಗೆ ದೇಶಾದ್ಯಂತ ಆಯುಷ್ಮನ್ ಭಾರತ್ ಡಿಜಿಟಲ್ ಮಿಷನ್ ಅನುಷ್ಟಾನಕ್ಕೆ ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯಡಿ ನಾಗರಿಕರು ತಮ್ಮ ಆಯುಷ್ಮನ್ ಭಾರತ್ ಆರೋಗ್ಯ ಅಕೌಂಟ್ ನಂಬರ್ ರಚಿಸಲು ಸಾಧ್ಯವಿದೆ. ಇದರೊಂದಿಗೆ ಅವರ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಬಹುದಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಆರೋಗ್ಯ ಐಡಿ ರಚಿಸಲು ಮತ್ತು ಆಸ್ಪತ್ರೆಯಿಂದ ಕ್ಲಿನಿಕಲ್ ನಿರ್ಧಾರದ ವಿವರಗಳನ್ನು ಒಳಗೊಂಡಿರುತ್ತದೆ.
ಟೆಲಿಮೆಡಿಷನ್ ಮತ್ತಿತರ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಕೋವಿನ್, ಆರೋಗ್ಯ ಸೇತು ಮತ್ತು ಇ- ಸಂಜೀವಿನಂತಹ ಪೋರ್ಟಲ್ ಗಳೊಂದಿಗೆ ಒಂದು ವರ್ಷದ ಅವಧಿಯಲ್ಲಿ ಡಿಜಿಟಲ್ ಆರೋಗ್ಯ ಸೇವೆಯಿಂದ ತೀವ್ರಗತಿಯ ಪ್ರಯೋಜನ ಆಗುತ್ತಿರುವುದು ಸಾಬೀತಾಗಿದೆ. ಆದಾಗ್ಯೂ. ಈ ಯೋಜನೆಯ ಸಮರ್ಪಕ ಅನುಷ್ಠಾನದ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರು ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಚಂಡೀಗಡ, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಾಮನ್- ಡಿಯು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದೀಪಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.
ಈ ವರ್ಷದ ಫೆಬ್ರವರಿ 24ರವರೆಗೂ 17,33,69,087 ಆಯುಷ್ಮನ್ ಭಾರತ್ ಆರೋಗ್ಯ ಅಕೌಂಟ್ ರಚನೆಯಾಗಿದ್ದು, 10,114 ವೈದ್ಯರು ಮತ್ತು 17,319 ಆರೋಗ್ಯ ಸೇವೆಗಳು ಎಬಿಡಿಎಂನಲ್ಲಿ ನೋಂದಣಿಯಾಗಿದೆ ಎಂದು ಮಾಹಿತಿ ನೀಡಲಾಗಿದೆ.