ಜಗತ್ತಿನ ಜನ,ಜನಾಂಗಗಳನ್ನು ನಮ್ಮನ್ನೂ ಸಹಿತ ಜೊತೆ ಇರಿಸಿ ಒಂದ್ಯೆದು ನಿಮಿಷ ಕಣ್ಮುಚ್ಚಿ ಚಿಂತನೆ ನಡೆಸಿ. ಎಷ್ಟೊಂದು ಭಾಷೆ, ಜನ,ಜನಾಂಗ......ಅಬ್ಬಬ್ಬಾ ನಮ್ಮ ಭೌದ್ದಿಕ ಸೀಮೆಗೆ ನಿಲುಕದಷ್ಟು ವಿಶಾಲತೆ, ವಿಸ್ಕೃತತೆ ಮತ್ತೆ ಅದರಾಚೆ ನಿಲುಕದ ವಿಸ್ತಾರತೆ ನಮ್ಮ ಮುಂದಿದೆ. ಅಥವಾ ನಮ್ಮ ತಿಳಿವಿಗಿಂತ ಆಚಗೆ ಏನೆಲ್ಲ ಇದೆ.
ಹಾಗಿದ್ದರೂ ನಾವು-ನೀವು ದೂರದ ಮುಂಬಯಿ,ದೆಹಲಿ, ಹಿಮಾಚಲ, ಚೀನಾ,ಜಪಾನ್,ಜರ್ಮನಿ,ಅಮೇರಿಕಾ ಹೀಗೆ ವಿವಿಧೆಡೆಗಳ ಹಲವು ವಿಷಯಗಳನ್ನು ತಿಳಿಯುವುದು, ಸಂವಾದ ನಡೆಸುವುದು 'ಭಾಷೆ' ಎಂಬ ಮಾಯಾ ಉಲಿಗಳ ಚಿಲಿಪಿಲಿಗಳಿಂದ.
ಇಡೀ ಜಗತ್ತನ್ನು ಒಟ್ಟಿಗೆ ಬೆಸೆಯುವ ಒಂದು ಪ್ರಬಲ ಮಾಧ್ಯಮವೇ ಭಾಷೆ. ಇದರಷ್ಟು ಪರಿಣಾಮಕಾರಿಯಾಗಿ ಬೇರೆ ಯಾವುದೇ ಮಾಧ್ಯಮಗಳು ವ್ಯಕ್ತಿಗಳನ್ನು ಪರಸ್ಪರ ಒಟ್ಟುಗೂಡಿಸುವುದಿಲ್ಲ. ಅನಾದಿ ಕಾಲದಿಂದಲೂ ಬೇರೆ ಬೇರೆ ಭೂ ಪ್ರದೇಶ, ಜನಾಂಗ, ಸಂಸ್ಕೃತಿಗಳಿಗೆ ಸೇರಿದ ಜನರನ್ನು ಪರಸ್ಪರ ಹತ್ತಿರಕ್ಕೆ ತಂದು ಕೊಡುವ ನಿಟ್ಟಿನಲ್ಲಿ ಭಾಷೆಯ ಪಾತ್ರ ಅತ್ಯಂತ ಮಹತ್ವದ್ದು. ಜಗತ್ತಿನ ವಿಕಸನದ ಜೊತೆಗೆಯೇ ಭಾಷೆಯೂ ಬೆಳೆದು ಬಂದಿದೆ. ವಿವಿಧ ಸಂಸ್ಕೃತಿ, ಜನಾಂಗ, ಪ್ರಾಂತ್ಯಗಳಿಗೆ ತಕ್ಕಂತೆ ತನ್ನ ರೂಪುರೇಷೆಯನ್ನು ಬದಲಾಯಿಸಿಕೊಂಡಿದೆ. ಜನರ ಭಾಷೆಯನ್ನು ಬೆಳೆಸುವ ಜೊತೆಗೆ ತಾನೂ ಬೆಳೆದು ಬಂದಿದೆ. ಈ ಜಗತ್ತಿನಲ್ಲಿ ನಾನಾ ಭಾಷೆಗಳಿವೆ. ಇದರ ಸಂಖ್ಯೆ ಎಣಿಕೆಗೂ ಸಿಗದು. ಭಾಷೆಯ ಹರವು ಒಂದು ಪ್ರಾಂತ್ಯದಿಂದ ಮತ್ತೊಂದಕ್ಕೆ ಬದಲಾಗುತ್ತ ಹೋಗುತ್ತದೆ. ಇದೇ ಕಾರಣಕ್ಕಾಗಿ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ರಾಷ್ಟ್ರಭಾಷೆಯನ್ನು ಪರಿಚಯಿಸಲಾಗಿದೆ. ದೇಶದ ಆಡಳಿತ ಸುಗಮವಾಗಿ ಸಾಗಲು ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದರೂ ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ ಮುಖ್ಯವಾಗಿ ಇದರಿಂದ ಮಾತೃಭಾಷೆ ಕಣ್ಮರೆಯಾಗುತ್ತದೆ ಎಂದು ಬಹುತೇಕ ಜನರ ಕಳಕಳಿಯಾಗಿದೆ. ಈ ನಿಟ್ಟಿನಲ್ಲಿ ಈಗ ಮಾತೃಭಾಷೆ ಎಲ್ಲಿಲ್ಲದ ಆದ್ಯತೆ ಪಡೆದುಕೊಂಡಿದೆ. ಜನರಿಗೆ ತಮ್ಮ ಮಾತೃಭಾಷೆಯಲ್ಲಿ ವಿಷಯಗಳು ಅರ್ಥವಾಗುವಷ್ಟು ಬೇರೆ ಯಾವುದೇ ಭಾಷೆಯಲ್ಲಿ ಆಗಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಪರಭಾಷೆಗಳ ಹಾವಳಿಯಲ್ಲಿ ಹಲವಾರು ಮಾತೃಭಾಷೆಗಳು ಇನ್ನಿಲ್ಲದಂತೆ ಕಣ್ಮರೆಯಾಗುತ್ತಿದೆ ಎಂಬ ಕಾರಣಕ್ಕಾಗಿ ಈಗ ಎಲ್ಲೆಡೆ ವಿವಿಧ ಮಾತೃಭಾಷೆಗಳ ಉಳಿವಿಗಾಗಿ ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನಗಳ ಒಂದು ಭಾಗವೇ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ. ಫೆಬ್ರವರಿ 21 ಅನ್ನು ಜಗತ್ತಿನಾದ್ಯಂತ ಇಂಟರ್‌ನ್ಯಾಷನಲ್ ಮದರ್ ಲಾಂಗ್ವೇಜ್ ಡೇ ಎಂದು ಆಚರಿಸಲಾಗುತ್ತದೆ.
ಹಿನ್ನೆಲೆ
ಪ್ರಥಮ ಬಾರಿಗೆ ಈ ದಿನವನ್ನು ಮಾತೃಭಾಷಾ ದಿನವನ್ನಾಗಿ ಆಚರಿಸಲು ಸೂಚಿಸಿದ್ದು ಬಾಂಗ್ಲಾದೇಶ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) 1999ರಲ್ಲಿ ಈ ದಿನವನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲು ಆರಂಭಿಸಿತು.
ಒಂದು ದೇಶದಲ್ಲಿ ಶಾಂತಿ ಸಹಿಷ್ಣುತೆ ನೆಲೆಸಬೇಕಾದರೆ, ವಿವಿಧ ಸಂಸ್ಕೃತಿಯ, ಭಾಷೆಯ ಜನರು ಒಬ್ಬರಿಗೊಬ್ಬರು ಅರಿತು ನಡೆಯಬೇಕು, ಬಾಳಬೇಕು ಎಂಬ ಧ್ಯೇಯದೊಂದಿಗೆ ಮಾತೃಭಾಷಾ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ಉದ್ದೇಶ
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನರು ಭಾಷಾ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ವ್ಯಕ್ತಿ ಅಭಿವೃದ್ಧಿ ಹೊಂದಬೇಕಾದರೆ, ಬಾಲ್ಯದಲ್ಲಿಯೇ ವಿವಿಧ ಭಾಷೆಗಳಲ್ಲಿ ಶಿಕ್ಷಣ ಪಡೆಯಬೇಕು. ಈ ಅಭಿವೃದ್ಧಿಗೆ ಭಾಷೆಯ ಸಮಸ್ಯೆ ಅಡ್ಡಿಯಾಗಿದೆ. ಆದ್ದರಿಂದ ಪ್ರಪಂಚದ ಎಲ್ಲಾ ಮೂಲೆಮೂಲೆಗಳ ಸಣ್ಣ ಸಣ್ಣ ಭಾಷೆಗಳ ಅಭಿವೃದ್ಧಿಯಾದರೆ, ಆ ಜನರ ಶೈಕ್ಷಣಿಕ ಅಭಿವೃದ್ಧಿಯಾಗುತ್ತದೆ. ವೈಜ್ಞಾನಿಕ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಇಡೀ ವಿಶ್ವದ ಎಲ್ಲಾ ಜನರು ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬಹುದು ಎಂದು ವಿಶ್ವಸಂಸ್ಥೆ ಹೇಳಿದೆ.
ಕೇಂದ್ರದ ಹಿಂದಿ ಹೇರಿಕೆಗೆ ವಿರೋಧ
ಯುನೆಸ್ಕೋ ಬಹುಭಾಷಿಕ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತುಕೊಡಬೇಕು ಎಂದು ಹೇಳಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಹಿಂದಿ ಭಾಷೆಯನ್ನೇ ಎಲ್ಲರೂ ಮಾತನಾಡಬೇಕು ಎಂದು ಬಲವಂತವಾಗಿ ಎಲ್ಲಾ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಿದೆ. ಹಿಂದಿ ಮಾತನಾಡದಿದ್ದರೆ, ಅಂತಹವರನ್ನು ದ್ವಿತೀಯ ದರ್ಜೆ ನಾಗರೀಕರಂತೆ ಕಾಣಲಾಗುತ್ತಿದೆ. ಏಕೆಂದರೆ, ನಮ್ಮ ಸಂವಿಧಾನದ 343-351ರಲ್ಲಿ ಈ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ.
ಈಗಿನ ತುಮುಲ:
ವಾಸ್ತವವಾಗಿ ತಂತ್ರಜ್ಞಾನಗಳು ಎಷ್ಟೇ ಬೆಳವಣಿಗೆ ಹೊಂದಿರಲಿ, ಇಂದು ಭಾಷೆ ಎಂಬುದು ಅದರದ್ದೇ ಮಹತ್ವ ಪಡೆದಿದ್ದು ನಮ್ಮನಿಮ್ಮ ಒಳದನಿಗಳ ಒಳಗೆ ನಮ್ಮ ಮಾತೃಭಾಷೆಯೇ ಮೊದಲು ಅಭಿವ್ಯಕ್ತಗೊಳ್ಳುವುದು ಎಂಬುದರಲ್ಲಿ ಯಾವ ವಿರೋಧವೂ ಇಲ್ಲ. ಅಥವಾ ನಾವದನ್ನು ಮರೆಯುತ್ತಿದ್ದೇವೆ ಎಂದರೆ ಯಾವುದಾದರೂ ಒತ್ತಡಗಳು ಖಂಡಿತಾ ಇದೆಯೆಂದೇ ಅರ್ಥ. ಇದೆಲ್ಲ ಅರಿವಾಗಬೇಕಾದರೆ ಮತ್ತೆ ಒಂದಷ್ಟು ಒಳಹೊಕ್ಕು ಮನನಮಾಡಬೇಕು. ಅದಕ್ಕೆ ಎಲ್ಲಾ ಗೋಡೆ, ಪರದೆಗಳನ್ನು ಸರಿಸಿ, ಹೊರಗಿನ ಬಾಲಿಶತನಗಳನ್ನೆಲ್ಲ ಬದಿಗಿರಿಸಿ ನಾನು ನಾನಾಗಿ ಯೋಚಿಸಲು ತೊಡಗಿಸಿಕೊಳ್ಳಬೇಕು.