ಹೈದರಾಬಾದ್: 'ರಾಮಾನುಜಾಚಾರ್ಯರಂತಹ ಸಂತರು-ದಾರ್ಶನಿಕರು ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿದ ರಾಷ್ಟ್ರದ ಪರಿಕಲ್ಪನೆ ನೀಡಿದ್ದಾರೆ' ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾನುವಾರ ಹೇಳಿದರು.
11ನೇ ಶತಮಾನದ ಸಂತ, ಧಾರ್ಮಿಕ ಸುಧಾರಕ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಾನುಜಾಚಾರ್ಯ ಹಾಗೂ ಅವರಂತಹ ತತ್ವಜ್ಞಾನಿಗಳು ದೇಶಕ್ಕಾಗಿ ಹೊಸ ಸಾಂಸ್ಕೃತಿಕ ಅಸ್ಮಿತೆಯನ್ನೇ ಸೃಷ್ಟಿಸಿ, ಅದನ್ನು ಪೋಷಿಸಿದರು. ಸಾಂಸ್ಕೃತಿಕ ಏಕತೆಗೆ ಶ್ರಮಿಸಿದರು' ಎಂದರು.
'ಭಾರತೀಯ ಸಂತರು ಪ್ರತಿಪಾದಿಸಿದ ಸಂಸ್ಕೃತಿ ಆಧಾರಿತ ರಾಷ್ಟ್ರವು ಪಾಶ್ಚಾತ್ಯ ಚಿಂತಕರ ಪರಿಕಲ್ಪನೆಗಿಂತ ಭಿನ್ನವಾದುದು. ನಮ್ಮ ಸಂವಿಧಾನದ ಮೂಲಭೂತ ತತ್ವಗಳಿಗೆ ದೇಶದ ಸಾಂಸ್ಕೃತಿಕ ಪರಂಪರೆಯೇ ತಳಹದಿ ಎಂಬ ಮಾತನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದಾರೆ' ಎಂದರು.
ಶತಮಾನಗಳಷ್ಟು ಹಿಂದೆಯೇ ಭಕ್ತಿ ಚಳವಳಿ- ಪರಂಪರೆ ದೇಶವನ್ನು ಒಗ್ಗೂಡಿಸಿದೆ. ಈ ಚಳವಳಿ ಭಕ್ತಿಪಂಥವಾಗಿ ವ್ಯಾಪಕವಾಗಿದ್ದನ್ನು ನಾವು ಕಾಣಬಹುದು. ಈ ಬಗ್ಗೆ ನಮ್ಮ ಪುರಾಣಗಳಲ್ಲಿಯೂ ಉಲ್ಲೇಖ ಸಿಗುತ್ತದೆ' ಎಂದು ವಿವರಿಸಿದರು.
'ರಾಮಾನುಜಾಚಾರ್ಯರ ಬೋಧನೆಗಳಿಂದ ಪ್ರೇರಿತಗೊಂಡ ಭಕ್ತಿಪಂಥದ ಪ್ರಭಾವವನ್ನು ತಮಿಳುನಾಡಿನ ಶ್ರೀರಂಗಂ, ಕಾಂಚಿಪುರಂ, ಉತ್ತರಪ್ರದೇಶದ ವಾರಾಣಸಿಯಂತಹ ಸ್ಥಳಗಳಲ್ಲಿ ನೋಡಬಹುದು. ಇಂಥ ಪಂಥಗಳ ಮೂಲಕ ಭಾರತೀಯರಲ್ಲಿನ ಭಾವನಾತ್ಮಕ ಏಕತೆ ಗಟ್ಟಿಗೊಂಡಿರುವುದನ್ನು ಸಹ ಗುರುತಿಸಬಹುದು' ಎಂದು ಕೋವಿಂದ್ ಹೇಳಿದರು.
'ರಾಮಾನುಜಾಚಾರ್ಯರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಸಿದ್ಧಾಂತ ಕೇವಲ ಭಾರತೀಯ ತತ್ವಜ್ಞಾನಕ್ಕೆ ನೀಡಿದ ಕೊಡುಗೆಯಲ್ಲ, ಈ ಸಿದ್ಧಾಂತ ನಮ್ಮ ದೈನಂದಿನ ಬದುಕಿಗೂ ಅನ್ವಯವಾಗುತ್ತದೆ' ಎಂದೂ ಅವರು ಹೇಳಿದರು.