ಕಾಸರಗೋಡು: ಕೇರಳದಲ್ಲಿ ಬಿಜೆಪಿಯ ಶಕ್ತಿ ಕೇಂದ್ರ ಎನಿಸಿರುವ ಕಾಸರಗೋಡಿನಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಪರಿಹರಿಸಲು ಆರೆಸ್ಸೆಸ್ ಮಧ್ಯ ಪ್ರವೇಶಿಸುವ ಎಲ್ಲ ಸಾಧ್ಯತೆ ದಟ್ಟವಾಗಿದೆ.
ಕುಂಬಳೆ ಗ್ರಾಮ ಪಂಚಾಯಿತಿಯ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನಗಿಟ್ಟಿಸಲು ಸಿಪಿಎಂ ಜತೆ ಕೈಜೋಡಿಸಿರುವ ಆರೋಪದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರೇಮಲತ, ಪ್ರೇಮಾವತೀ ಅವರನ್ನು ಪದಚ್ಯುತಿಗೊಳಿಸುವುದರ ಜತೆಗೆ. ಇದಕ್ಕೆ ಯೋಜನೆ ರೂಪಿಸಿದ ಪಕ್ಷದ ಮುಖಂಡರಾದ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ಪಿ.ಸುರೇಶ್ ಕುಮಾರ್ ಶೆಟ್ಟಿ ಹಾಗೂ ಮಣಿಕಂಠ ರೈ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಆಗ್ರಹಿಸಿ ಭಾನುವಾರ ಬಿಜೆಪಿ ಜಿಲ್ಲಾ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ನಿಭಾಯಿಸುವಲ್ಲಿ ಬಿಜೆಪಿಯ ಜಿಲ್ಲಾ ಕೋರ್ ಕಮಿಟಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದರೆ, ಇತ್ತ ರಾಜ್ಯ ಸಮಿತಿಗೂ ಸಮಸ್ಯೆಪರಿಹರಿಸುವುದು ಕಗ್ಗಂಟಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆರೆಸ್ಸೆಸ್ ಮಧ್ಯ ಪ್ರವೇಶಿಸುವುದೂ ಅನಿವಾರ್ಯವಾಗಲಿದೆ ಎಂಬುದಾಗಿ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತರೊಬ್ಬರನ್ನು ಕಡಿದು ಕೊಲೆಗೈದ ಪ್ರಕರಣದ ಆರೋಪಿ ಸೇರಿದಂತೆ ಮೂವರು ಸಿಪಿಎಂ ಸದಸ್ಯರನ್ನು ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನಕ್ಕೇರಿಸಲು ಬಿಜೆಪಿ ಸಹಾಯ ಮಾಡಿರುವುದು ಕಾರ್ಯಕರ್ತರ ಮಧ್ಯೆ ವ್ಯಾಪಕ ಅಸಮಧಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಹಾವು-ಮುಂಗುಸಿ ವೈರತ್ವ ಹೊಂದಿರುವ ಬಿಜೆಪಿ ಮತ್ತು ಸಿಪಿಎಂ ಕೆಲವು ಮುಖಂಡರ ಹಾಗೂ ಜನಪ್ರತಿನಿಧಿಗಳ ದುರಾಸೆಯಿಂದ ಕುಂಬಳೆ ಗ್ರಾಮ ಪಂಚಾಯಿತಿಯಲ್ಲಿ ಅಧಿಕರಕ್ಕಾಗಿ ಒಟ್ಟು ಸೇರಿರುವ ವಿಷಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂತಹ ಜಟಿಲ ಸಮಸ್ಯೆ ಪರಿಹಾರ ಆರೆಸ್ಸೆಸ್‍ನಿಂದ ಮಾತ್ರ ಸಾಧ್ಯವಾಗಲಿದೆ ಎಂಬುದಾಗಿ ಕಾರ್ಯಕರ್ತರೂ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಗೆ ಭರವಸೆಯ ಕಣ್ಣುಗಳೊಂದಿಗೆ ನೋಡಲಾರಂಭಿಸಿದ್ದಾರೆ.